ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆಯುತ್ತಿರುವ 28ನೇ ವಷರ್ದ ಭಜನಾ ಕಮ್ಮಟದ ಆರನೇ ದಿನವಾದ ಶನಿವಾರ ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು. 
ದಕ್ಷಿಣ ಕನ್ನಡ

ಭಜನೆಯಿಂದ ಉತ್ತಮ ವ್ಯಕ್ತಿತ್ವ ರೂಪು

ಶಿಬಿರಾರ್ಥಿಗಳಿಗೆ ಉಪನ್ಯಾಸ

ಬೆಳ್ತಂಗಡಿ: ಭಜನೆ ಮತ್ತು ನೈತಿಕತೆ ಆಳವಾಗಿ ಬೆರೆತುಕೊಂಡಿದ್ದು, ನೀತಿಯುತವಾದ ನಾಯಕತ್ವ ಬೆಳೆಸಿಕೊಳ್ಳುವಲ್ಲಿ ಭಜನೆ ಸಹಕಾರಿಯಾಗಿದೆ. ಭಜನೆಯಿಂದ ನಮ್ಮ ಆಂತರಿಕ ಗುಣಲಕ್ಷಣಗಳು ಪರಿವರ್ತನೆಯಾಗಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದಾಗಿದೆ ಎಂದು ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆಯುತ್ತಿರುವ 28ನೇ ವಷರ್ದ ಭಜನಾ ಕಮ್ಮಟದ ಆರನೇ ದಿನವಾದ ಶನಿವಾರ ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಆಧುನಿಕತೆಯ ಜೀವನಶೈಲಿಯಲ್ಲಿ ಸಾರ್ಥಕ ಬದುಕು ಅಸಾಧ್ಯವಾಗಿದ್ದು, ಪೂರ್ವಕಾಲದ ಸಂಸ್ಕೃತಿ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಜನೆ ಮೈಗೂಡಿಸಿಕೊಳ್ಳುವ ಮೂಲಕ ಸಾರ್ಥಕ ಬದುಕನ್ನು ಸಾಧ್ಯವಾಗಿಸಬಹುದಾಗಿದೆ. ಡಾ.ಹೆಗ್ಗಡೆ ದಂಪತಿಯ ದಿವ್ಯ ಚಿಂತನೆಯಿಂದ ಹೊರಬಂದ ಗ್ರಾಮೀಣಾಭಿವೃದ್ಧಿ ಯೋಜನೆ ಇಂದು ಕರ್ನಾಟಕದ ಸಾವಿರಾರು ಜನರ ಬದುಕಿಗೆ ನೆರಳಾಗಿ ನಿಂತಿದೆ. ಜನತೆಗೆ ಮೂಲ ಸೌಕರ್ಯ ಒದಗಿಸಿ, ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಸಾವಿರಾರು ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದರು.

ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಹಿರಿಯ ಮುತ್ಸದ್ಧಿ ಭುಜಬಲಿ, ಭಜನಾ ಕಮ್ಮಟ ಪರಿಷತ್ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಕೈಗೊಂಡಾಗ ಮಾತ್ರ ಉತ್ತಮ ನಾಯಕನಾಗಲು ಸಾಧ್ಯ. ಪ್ರತಿಯೊಬ್ಬ ಭಜಕನೂ ಯಾವುದೇ ದುರಭ್ಯಾಸಗಳಿಗೆ ಬಲಿಯಾಗದೆ, ಮಾದರಿ ತತ್ವ ಮೈಗೂಡಿಸಿಕೊಂಡು ಸಮಾಜಕ್ಕೆ ಒಬ್ಬ ಆದರ್ಶ ನಾಯಕನಾಗಬೇಕಾಗಿದೆ. ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಭಾಗಿಯಾಗುವುದರಿಂದ ಕುಟುಂಬದಲ್ಲಿ ಪ್ರೀತಿ, ಸೌಹಾರ್ದ, ಐಕ್ಯ ಹಾಗೂ ಒಗ್ಗಟ್ಟನ್ನು ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ನಾವು ಮುನ್ನಡೆಯಬೇಕು.
ಅನಿಲ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌ಕೆಡಿಆರ್‌ಡಿಪಿ