ಶಿಥಿಲಾವಸ್ಥೆಯಲ್ಲಿರುವ ಕೇಮಾರು ಹೇಮಂತಬೆಟ್ಟು ಸಂಪರ್ಕದ ಕಾಲುಸಂಕ 
ದಕ್ಷಿಣ ಕನ್ನಡ

ಕುಸಿವ ಹಂತದಲ್ಲಿ ಕಾಲುಸಂಕ

ಕೇಮಾರು ಹೇಮಂತಬೆಟ್ಟು ಸಂಪರ್ಕಿಸುವ ಕಿರು ಸೇತುವೆ

ಯಶೋಧರ ವಿ. ಬಂಗೇರ ಮೂಡುಬಿದಿರೆ

ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಮಾರಿನ ಹೇಮಂತಬೆಟ್ಟು ಬಳಿ ಮಂದಾರ ನದಿಗೆ ಮೂರು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಕಾಲುಸಂಕ ಸಂಪೂರ್ಣ ಶಿಥಿಲಗೊಂಡಿದ್ದು, ಕುಸಿಯುವ ಭೀತಿ ಎದುರಾಗಿದೆ.

ಕಾಲುಸಂಕದ ಒಂದು ಬದಿ ಕುಸಿದುಬಿದ್ದಿದ್ದು, ಒಳಗಿನ ಕಬ್ಬಿಣದ ರಾಡ್‌ಗಳು ಹೊರಚಿಮ್ಮಿವೆ. ನಡುಭಾಗವೂ ಬಿರುಕುಬಿಟ್ಟು ಶಿಥಿಲಾವಸ್ಥೆ ತಲುಪಿರುವುದರಿಂದ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಳೆಯ ಕಾಲುಸಂಕಕ್ಕೆ ತೇಪೆ ಹಾಕುವ ಬದಲು ಲಘು ವಾಹನ ಸಂಚಾರಕ್ಕೆ ಯೋಗ್ಯವಾದ ಸುಸಜ್ಜಿತ ಕಿರು ಸೇತುವೆ ಹಾಗೂ ಒಂದು ಕಿ.ಮೀ. ಪೂರಕ ರಸ್ತೆ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಪ್ರಬಲ ಬೇಡಿಕೆ.

ಹಲವು ಊರುಗಳಿಗೆ ನೇರ ಸಂಪರ್ಕ

ಹೇಮಂತಬೆಟ್ಟು ಪರಿಸರದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳಿದ್ದು, ಈ ಸೇತುವೆ ಹಾಗೂ ರಸ್ತೆ ನಿರ್ಮಾಣವಾದರೆ ಕೇಮಾರಿನಿಂದ ಕಾಂತಾವರ, ಕೇಪ್ಲಾಜೆ, ಕಡಂದಲೆ, ವರ್ಣಬೆಟ್ಟು, ಕೊಡ್ಯಡ್ಕ ಹಾಗೂ ಮೂಡುಬಿದಿರೆಗೆ ನೇರ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗಡಿಭಾಗದ ಜನರ ಸಂಚಾರ ಸುಗಮಗೊಳ್ಳಲಿದ್ದು, ಕೃಷಿಕರು, ಕಾರ್ಮಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಮನವಿಗಳಿದ್ದರೂ ಪರಿಹಾರವಿಲ್ಲ

ಕಳೆದ ಐದಾರು ವರ್ಷಗಳಿಂದ ಪಾಲಡ್ಕ ಗ್ರಾಮ ಪಂಚಾಯಿತಿಗೆ ಮೂರುನಾಲ್ಕು ಬಾರಿ ಮನವಿ ಸಲ್ಲಿಸಲಾಗಿದೆ. ಶಾಸಕರಿಗೆ ಮೂರು ಬಾರಿ 150 ಜನರ ಸಹಿಯ ಮನವಿ ನೀಡಲಾಗಿದೆ. ಹಿಂದಿನ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರಿಗೂ ಮನವಿ ಸಲ್ಲಿಸಲಾಗಿದೆ. ಕಳೆದ ಮಳೆಗಾಲದಲ್ಲಿ ಮಿಥುನ್ ರೈ ಸ್ಥಳ ಪರಿಶೀಲನೆ ನಡೆಸಿ, ಈ ಕುರಿತು ಆಗಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರದ ಮೂಲಕ ಸಂಪರ್ಕಿಸಿದ್ದರು. ಸ್ಥಳೀಯರೂ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪಂಚಾಯಿತಿ ವತಿಯಿಂದ ಪಂಚಾಯತ್ ರಾಜ್ ಇಲಾಖೆಗೆ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಪತ್ರ ಸಲ್ಲಿಸಲಾಗಿದೆ.

ಸುಮಾರು 30 ವರ್ಷಗಳಿಂದ ಈ ಕಾಲುಸಂಕವೇ ನಮ್ಮ ಭಾಗದ ಜನರ ಸಂಪರ್ಕಕ್ಕೆ ಆಧಾರವಾಗಿದೆ. ಕಾಲುಸಂಕವನ್ನು ದುರಸ್ತಿ ಮಾಡುವ ಬದಲು ಲಘು ವಾಹನ ಸಂಚಾರಕ್ಕೆ ಅನುಕೂಲವಾಗುವ ಸೇತುವೆ ಹಾಗೂ ಪೂರಕ ರಸ್ತೆ ನಿರ್ಮಿಸಿ ಜನರ ಬಹುಕಾಲದ ಬೇಡಿಕೆಗೆ ಶೀಘ್ರ ಸ್ಪಂದಿಸಬೇಕು.
ಕೇಮಾರು ಜಯದೇವ ಭಟ್, ಸ್ಥಳೀಯರು