ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪದವಿ ಉನ್ನತ ಅವಕಾಶಗಳಿಗೆ ಬಾಗಿಲು ತೆರೆಯುವ ಪಾಸ್‌ಪೋರ್ಟ್ ಇದ್ದಂತೆ. ವಿದ್ಯಾರ್ಥಿಗಳು ದೊಡ್ಡ ಗುರಿಗಳನ್ನು ಹೊಂದಿರುವ ಜತೆ ವಿನಯವಂತರಾಗಿರಬೇಕು. ನೈತಿಕ ಮೌಲ್ಯಗಳು ಮತ್ತು ಪ್ರಾಮಾಣಿಕತೆಯನ್ನು ಮರೆಯದೆ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಹೇಳಿದರು.
ದೇರಳಕಟ್ಟೆಯ ಯೆಂಡ್ಯೂರೆನ್ಸ್ ಝೋನ್‌ನಲ್ಲಿ ಸೋಮವಾರ ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾಲಯದ ಸಂಯೋಜಿತ ಸಂಸ್ಥೆ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯ 7ನೇ ಪದವಿ ಪ್ರದಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರಿನ ಎ.ಕೆ.ಬನ್ಸಾಲ್ ಗ್ರೂಪ್ ಅಧ್ಯಕ್ಷ ದೀಪಕ್ ಮಿಶ್ರಾ ಮಾತನಾಡಿದರು. ಬಿ.ಎಸ್ಸಿ., ಎಂ.ಎಸ್ಸಿ., ಎಂಸಿಎ, ಎಂಬಿಎ ಮತ್ತು ಆನ್‌ಲೈನ್ ವಿಭಾಗಗಳ ಹಾಗೂ ವಿಶ್ವವಿದ್ಯಾಲಯದ ಎಂ.ಲಿಬ್. ಮತ್ತು ಎಂಎಸ್‌ಡಬ್ಲ್ಯೂ ಕೋರ್ಸ್‌ಗಳ 734 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಯೆನೆಪೋಯ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದಿಂದ ಪ್ರೊ.ಶರೀನಾ ಪಿ. ಮಾರ್ಗದರ್ಶನದಲ್ಲಿ ಪ್ರಥಮ ಪಿಎಚ್.ಡಿ. ಪದವಿ ಪಡೆದ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕಿ ಡಾ.ರಝೀನಾ ಅವರನ್ನು ಗೌರವಿಸಲಾಯಿತು. ಯೆನೆಪೋಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅಶ್ವಿನಿ ದತ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಪ್ರೊ.ಶರೀನಾ ಪಿ. ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ.ಜೀವನ್ ರಾಜ್ ವಾರ್ಷಿಕ ವರದಿ ವಾಚಿಸಿದರು. ಉಪಪ್ರಾಂಶುಪಾಲ ನಾರಾಯಣ ಸುಕುಮಾರ್ ಎ. ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ರೇಷ್ಮಾ, ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕಾವ್ಯಶ್ರೀ ಹಾಗೂ ಮ್ಯಾನೇಜ್‌ಮೆಂಟ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಿಹಾ ಪರ್ವೀನ್ ನಿರೂಪಿಸಿದರು.
ವೃತ್ತಿಪರ ಬೆಳವಣಿಗೆಯನ್ನು ಕೇವಲ ಸಂಬಳ ಅಥವಾ ಹುದ್ದೆಯಿಂದ ಅಳೆಯಬಾರದು. ಜ್ಞಾನ, ಕೌಶಲ ಮತ್ತು ನಾವು ಸೃಷ್ಟಿಸುವ ಮೌಲ್ಯಗಳು ಮುಖ್ಯ. ಸವಾಲು ಎದುರಿಸಲು ಹಿಂಜರಿಯಬಾರದು.ದೀಪಕ್ ಮಿಶ್ರಾ, ಎ.ಕೆ.ಬನ್ಸಾಲ್ ಗ್ರೂಪ್ ಅಧ್ಯಕ್ಷ