ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ, ನಾಯಕತ್ವ ಗುಣ ಹಾಗೂ ಸೃಜನಶೀಲತೆ ಬೆಳೆಸುವ ಉದ್ದೇಶದಿಂದ ವಿಝ್ ವರ್ಲ್ಡ್ ಎಂಬ ವಿನೂತನ ನೇರ ದೂರದರ್ಶನ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸುತ್ತಾ ಬರಲಾಗಿದೆ. ಮಕ್ಕಳ ಭಾಗವಹಿಸುವಿಕೆ ಮತ್ತು ಅವರಲ್ಲಿರುವ ಆತ್ಮವಿಶ್ವಾಸ ಸಂತಸ ತಂದಿದೆ ಎಂದು ವಿದ್ವತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಇನ್‌ಸ್ಪೈರ್ ವಿದ್ವತ್ ಎಂಬ ವಿಚಾರದಡಿ ಗುರುವಾಯನಕೆರೆ ಶಕ್ತಿನಗರ ವಿದ್ವತ್ ಪಿಯು ಕಾಲೇಜಿನಲ್ಲಿ ನೇರ ದೂರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯಾಧಾರಿತ ಕಲಿಕೆಗೆ ಸೀಮಿತವಾಗದೆ, ಸಾರ್ವಜನಿಕವಾಗಿ ಹೇಗೆ ಪ್ರತಿಕ್ರಿಯಿಸಬೇಕು, ವಿಚಾರಗಳನ್ನು ಸ್ಪಷ್ಟವಾಗಿ ಯಾವ ರೂಪದಲ್ಲಿ ಪ್ರಸ್ತುತಪಡಿಸಬೇಕು, ಪ್ರಶ್ನೆಗಳನ್ನು ಕೇಳುವುದು ಹಾಗೂ ತಂಡವಾಗಿ ಕಾರ್ಯನಿರ್ವಹಿಸುವಂತಹ ಕೌಶಲಗಳನ್ನು ಬೆಳೆಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದರು.
ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ.ಮಂಡಗಳಲೆ ಮಾತನಾಡಿ, ವಿದ್ಯಾರ್ಥಿಗಳು ತರಗತಿ ಮಾತ್ರವಲ್ಲದೆ, ಅದಕ್ಕೂ ಆಚೆಗಿನ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮ ಪ್ರತಿಭೆ ವಿಸ್ತರಿಸುವಲ್ಲಿ ದೂರದರ್ಶನದ ಜಗತ್ತನ್ನು ಇಲ್ಲಿ ಪರಿಚಯಿಸಲಾಗಿದೆ. ವರದಿಗಾರಿಕೆ, ಸುದ್ದಿ ಪ್ರಸಾರ, ಸಾಮಾಜಿಕ ವಿಚಾರಗಳೆಡೆಗಿನ ಅವರ ಜ್ಞಾನ ವಿಸ್ತರಿಸಲು ಇದೊಂದು ವೇದಿಕೆಯಾಗಿದೆ ಎಂದರು.
ವಿದ್ವತ್ ಕಾಲೇಜಿನ ಪಿಆರ್‌ಒ ಚೈತ್ರೇಶ್ ಸಿ.ಇಳಂತಿಲ ಮಾತನಾಡಿ, ಆತ್ಮವಿಶ್ವಾಸ ಮತ್ತು ಸೃಜನಶೀಲತೆಯ ಸಂಗಮವಾಗಿರುವ ಈ ವೇದಿಕೆ ವಿದ್ಯಾರ್ಥಿಗಳು ತಮ್ಮದೇ ಧ್ವನಿಯ ಶಕ್ತಿಯನ್ನು ಅರಿತು ನಾಯಕತ್ವದತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸಿದೆ ಎಂದರು.
ತೀರ್ಪುಗಾರರಾಗಿದ್ದ ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಜಗನ್ನಾಥ ಹಾಗೂ ವೃತ್ತಿ ಮತ್ತು ಜೀವನ ಮಾರ್ಗದರ್ಶನ ತಜ್ಞ ವಿಕ್ರಮ್ ನಾಯಕ್ ಮಾತನಾಡಿದರು.
ವಿದ್ವತ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರಜ್ವಲ್ ರೈ, ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ಪ್ರಾಂಶುಪಾಲ ಬಾಲಕೃಷ್ಣ ನಾಯಕ್, ಖಜಾಂಚಿ ಕಾಶೀನಾಥ ಎಂ.ಕೆ., ಟ್ರಸ್ಟಿಗಳಾದ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಸಾತ್ವಿಕ್ ಶೆಟ್ಟಿ ಉಪಸ್ಥಿತರಿದ್ದರು. ಆಂಗ್ಲವಿಭಾಗ ಉಪನ್ಯಾಸಕ ವಿನಯ ಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು.
ವಿದ್ವತ್ ಪ್ರೈಮ್, ವಾಯ್ಸ ಆಫ್ ಇಂಡಿಯಾ, ವಿದ್ವತ್ ಸಾರಥಿ, ವಾಯ್ಸ ಆಫ್ ವಿದ್ವತ್ ಎಂಬ ನಾಲ್ಕು ತಂಡಗಳಿದ್ದವು. ವಾಯ್ಸ ಆಫ್ ಇಂಡಿಯಾ ಪ್ರಥಮ ಸ್ಥಾನ , ವಾಯ್ಸ ಆಫ್ ವಿದ್ವತ್ ದ್ವಿತೀಯ ಸ್ಥಾನಗಳಿಸಿತು. ಉತ್ತಮ ನಿರೂಪಕರಾಗಿ ಶ್ರವಣ್ ರೈ, ಸಿ.ಎ.ಫಾತಿಮಾ, ಬೆಸ್ಟ್ ಮಾಡರೇಟರ್ ಮೈಲಾರ್ ಚಿಲ್ಲಾಲ್, ಬೆಸ್ಟ್ ರಿಪೋರ್ಟರ್ ಫಾತಿಮಾ ಇಫಾ ಹಾಗೂ ಉತ್ತಮ ತಂತ್ರಜ್ಞಾನ ವಿಭಾಗದಲ್ಲಿ ವಾಯ್ಸ ಆಫ್ ಇಂಡಿಯಾ ತಂಡ ಪ್ರಥಮ ಸ್ಥಾನಗಳಿಸಿತು.