ದಕ್ಷಿಣ ಕನ್ನಡ

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 75 ವರ್ಷದ ಮಹಿಳೆಗೆ 2 ಕೋಟಿ ರೂ. ವಂಚನೆ

ಮಂಗಳೂರು: ಪೊಲೀಸ್ ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 75 ವರ್ಷದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಹಂತ ಹಂತವಾಗಿ ಒಟ್ಟು 2 ಕೋಟಿ ರೂ. ವರ್ಗಾಯಿಸಿಕೊಂಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಸೆ.25ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ಬಾಂಬೆ ಕೊಲಾಬಾ ಪೊಲೀಸ್ ಅಧಿಕಾರಿ ಸಂದೀಪ್ ರಾವ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತರರಾಷ್ಟ್ರೀಯ ಹಣ ಅಕ್ರಮ ವರ್ಗಾವಣೆ ಆರೋಪಿ ನರೇಶ್ ಗೋಯಲ್ ಜತೆ ಹಣ ವರ್ಗಾವಣೆ, ಮಾದಕವಸ್ತು ವ್ಯವಹಾರ ಹಾಗೂ ಮಕ್ಕಳ ಕಳ್ಳ ಸಾಗಣೆಯಂತಹ ಅಪರಾಧಗಳಲ್ಲಿ ಭಾಗಿಯಾಗಿದ್ದೀರಿ. ಈ ಬಗ್ಗೆ ಬಾಂಬೆ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾನೆ.

ಬಳಿಕ ಮತ್ತೊಂದು ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಸಮಾಧಾನ್ ಪವಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ನೀವು ಅಂತರರಾಷ್ಟ್ರೀಯ ಮಟ್ಟದ ಅಪರಾಧದಲ್ಲಿ ಭಾಗಿಯಾಗಿದ್ದು, ನ್ಯಾಷನಲ್ ಸೀಕ್ರೆಸಿ ಆಕ್ಟ್ ಪಾಲಿಸಬೇಕು ಎಂದು ಹೇಳಿ ಭಯ ಹುಟ್ಟಿಸಿದ್ದಾರೆ. ಅಲ್ಲದೆ, ತಾವು ಸರ್ವೇಲೈನ್ಸ್‌ನಲ್ಲಿರುವುದರಿಂದ ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಸಿದ್ದಾರೆ.

ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ಕ್ಲಿಯರೆನ್ಸ್ ನೀಡುವುದಾಗಿ ನಂಬಿಸಿದ ಆರೋಪಿಗಳು, ದೂರುದಾರರಿಂದ ಬ್ಯಾಂಕ್ ಖಾತೆ ಹಾಗೂ ಆಸ್ತಿ ವಿವರಗಳನ್ನು ಪಡೆದುಕೊಂಡಿದ್ದಾರೆ. ನಂತರ ತಮ್ಮ ಸೂಚನೆಯಂತೆ ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ತಿಳಿಸಿದ್ದಾರೆ.

ಆರೋಪಿಗಳ ಸೂಚನೆಯಂತೆ ದೂರುದಾರರು 60 ಲಕ್ಷ ರೂ. ಹಾಗೂ ಅ.3ರಂದು 1.40 ಕೋಟಿ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಸೆ.25ರಿಂದ ಅ.5ರವರೆಗೆ ಹಂತ ಹಂತವಾಗಿ ಒಟ್ಟು 2 ಕೋಟಿ ರೂ. ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.