ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಸುಲಿಗೆ ಕೃತ್ಯ ಮೇಲ್ಮನವಿ ನ್ಯಾಯಾಲಯದಲ್ಲಿ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ವಿಚಾರಣಾ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಸುಲಿಗೆ ಕೃತ್ಯ ಎಸಗಿದ ಅಪರಾಧಿಗೆ ಮೇಲ್ಮನವಿ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗದ ಆರ್.ಎಂ.ಎಲ್. ನ್ಯೂ ಮಂಡಳಿ ನಿವಾಸಿ ಶಿವಕುಮಾರ್ (38) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ವಿವರ: 2017 ಜೂ.26ರಂದು ಸ್ಟೇಟ್‌ಬ್ಯಾಂಕ್ ಬಳಿ ಇರುವ ಫುಟ್‌ಬಾಲ್ ಮೈದಾನದ ಪೆವಿಲಿಯನ್ ಕಟ್ಟಡದ ಉತ್ತರಕ್ಕೆ ಕಾಲುದಾರಿಯಲ್ಲಿ ಲೋಕೇಶ್ ಎಂಬವರು ಫೋನ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಅಪರಾಧಿ ಶಿವಕುಮಾರ್ ಮೊಬೈಲ್‌ನ್ನು ಹಾಗೂ ಇನ್ನೋರ್ವ ಮುತ್ತುಮ್ ಎಂಬಾತ ಲೋಕೇಶ್ ಅವರ ಕುತ್ತಿಗೆಯಲ್ಲಿದ್ದ ಗಣಪತಿ ಪೆಂಡೆಂಟ್ ಇದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಮಾಡಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರಿನ 2ನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಆ್ಯಂಡ್ ಸಿ.ಜೆ.ಎಂ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಲಯವು ಆರೋಪಿಯನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಅಭಿಯೋಜನೆಯು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಅಲ್ಲಿ ವಿಚಾರಣೆ ನಡೆದು ನ್ಯಾಯಾಲಯವು ಅಭಿಯೋಜನೆಯ ಹಾಗೂ ಆರೋಪಿ ಪರ ವಾದ ಪ್ರತಿವಾದ ಆಲಿಸಿ ಆರೋಪಿತರ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ಎ.28ರಂದು ಜಿಲ್ಲಾ ನ್ಯಾಯಾಧೀಶ ಮೋಹನ ಜೆ.ಎಸ್. ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ಮೇಲ್ಮನವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.