ಮಂಗಳೂರು: ವ್ಯವಹಾರದ ಉದ್ದೇಶದಿಂದ ಸ್ನೇಹಿತನ ಬ್ಯಾಂಕ್ ಖಾತೆಯನ್ನು ಪಡೆದು ಅದನ್ನು ದುರುಪಯೋಗಪಡಿಸಿಕೊಂಡಿದ್ದ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂದ್ರ ಪ್ರದೇಶದವರಾದ ಶೇಖ್ ಕರೀಮುಲ್ಲಾ ರಸೂಲ್ (27), ಕರ್ನೂಲ್‌ನ ಬುಡಿದಿನ್ನೆ ವಂಶಿ ಗುರು (21) ಹಾಗೂ ಆಂಧ್ರಪ್ರದೇಶದ ಉತ್ಪಲ ಸಂತೋಷ್ ಕೃಷ್ಣ (35), ಹೈದರಾಬಾದ್‌ನವರಾದ ಪಂಡಿತಿ ಕ್ರಾಂತಿ ಕುಮಾರ್ (36) ಮತ್ತು ಬಡೆ ಶ್ರೀನಿವಾಸ್ (38), ಮೂಲ್ಕಿಯ ಇಬ್ರಾಹಿಂ (35) ಬಂಧಿತರು.
ಆರೋಪಿಗಳಿಂದ ಮೊಬೈಲ್ ಫೋನ್-18, ಲ್ಯಾಪ್ ಟಾಪ್ -1, ಸಿಮ್ ಕಾರ್ಡ್ 12, ಚೆಕ್ ಬುಕ್ 15, ಬ್ಯಾಂಕ್ ಪಾಸ್ ಬುಕ್ 12, ಡೆಬಿಟ್ ಕಾರ್ಡ್ 18 ವಶಪಡಿಸಿಕೊಳ್ಳಲಾಗಿದೆ .
ಈ ಪ್ರಕರಣದ ದೂರುದಾರ, ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರ ಸ್ನೇಹಿತ ಇಬ್ರಾಹಿಂ ಎಂಬಾತನು ದೂರುದಾರರ ಕರೆಂಟ್ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ನೀಡುವಂತೆ ಕೇಳಿಕೊಂಡಿದ್ದು, ದೂರುದಾರರು ಅದಕ್ಕೆ ಒಪ್ಪಿ ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿ.ಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ ಟೆಲ್ ಕಂಪನಿಯ ಸಿಮ್ ಕಾರ್ಡನ್ನು ಇಬ್ರಾಹಿಂಗೆ ನೀಡಿದ್ದರು. ಈ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ತನಿಖೆ ಕೈಗೊಂಡು, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸಿದಾಗ, ಸದ್ರಿ ಬ್ಯಾಂಕ್ ಖಾತೆ ದುರುಪಯೋಗಪಡಿಸಿಕೊಂಡ ಸೈಬರ್ ವಂಚನಾ ತಂಡವು ಹೈದರಾಬಾದಿನಲ್ಲಿ ಕಾರ್ಯಾಚರಿಸುತ್ತಿರುವುದು ಕಂಡುಬಂದಿದ್ದು, ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಹೈದರಾಬಾದ್ ಗೆ ತೆರಳಿ ಸೈಬರ್ ವಂಚನಾ ತಂಡವನ್ನು ಪತ್ತೆ ಮಾಡಿ, 5 ಜನ ಆರೋಪಿತರನ್ನು ಹೈದರಾಬಾದ್‌ನಲ್ಲಿ ಹಾಗೂ ಒರ್ವ ಆರೋಪಿತನನ್ನು ಮಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮುಖಾಂತರ ಬ್ಯಾಂಕ್ ಖಾತೆದಾರರಿಗೆ ಶೇ.4 ರಿಂದ 6 ರಷ್ಟು ಕಮಿಷನ್ ನೀಡುವುದಾಗಿ ಅಕರ್ಷಕ ಜಾಹೀರಾತುಗಳನ್ನು ನೀಡಿ, ಇದರಿಂದ ದುರಾಸೆಗೊಳಗಾದ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಮತ್ತು ಓಟಿಪಿಯನ್ನು ಪಡೆದುಕೊಂಡು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸಿ, ವಂಚನೆ ನಡೆಸುತ್ತಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.
ಖಾತೆಗಳ ಮೇಲೆ ದಾಖಲಾದ ಪ್ರಕರಣ
ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಸದ್ರಿ ಪ್ರಕರಣದ ಒಂದು ಬ್ಯಾಂಕ್ ಖಾತೆಯ ಮೇಲೆ ಎನ್‌ಸಿಆರ್‌ಪಿ ಪೋರ್ಟಲ್ ನಲ್ಲಿ ದೇಶದದ್ಯಾಂತ ಸುಮಾರು 5 ದೂರು ಗಳು ದಾಖಲಾಗಿರುತ್ತವೆ. ಆರೋಪಿತರಿಂದ ಸ್ವಾಧೀನಪಡಿಸಿದ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳನ್ನು ಪರಿಶೀಲನೆ ನಡೆಸಿದಾಗ, ಒಟ್ಟು 72 ಖಾತೆಗಳ ವಿವರಗಳು ಕಂಡುಬಂದಿದ್ದು, ಅದರಲ್ಲಿ 30 ಬ್ಯಾಂಕ್ ಖಾತೆಗಳ ಮೇಲೆ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ಒಟ್ಟು 272 ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಕಂಡು ಬಂದಿರುತ್ತದೆ. ಸದ್ರಿ ಸೈಬರ್ ವಂಚನಾ ತಂಡವು ಫೆ.26 ರಂದು ಒಂದೇ ದಿನ 2 ಕೋಟಿಗೂ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿರುವುದು ತನಿಖೆ ಸಮಯ ಕಂಡುಬಂದಿದ್ದು, ಸೈಬರ್ ವಂಚಕರು ವಂಚನೆಗೆ ಬಳಕೆ ಮಾಡಿರುವ ಬ್ಯಾಂಕ್ ಖಾತೆಗಳ ಮೇಲೆ ದಾಖಲಾಗಿರುವ ಪ್ರಕರಣಗಳು ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.