ಕಂಬಳಪದವು ನಿವಾಸಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ  
ದಕ್ಷಿಣ ಕನ್ನಡ

ಮೊಬೈಲ್‌ಗೆ ತಂಗಿಯನ್ನೇ ಕೊಲೆಗೈದ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ

ಮಂಗಳೂರು : ಮೊಬೈಲ್ ವಿಚಾರವಾಗಿ ತಂಗಿಯೊಂದಿಗೆ ನಡೆದ ಮಾತಿನ ಚಕಮಕಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ ಆರೋಪ ಸಾಬೀತಾಗಿದ್ದು, ಅಪರಾಧಿಗೆ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಕಂಬಳಪದವು ನಿವಾಸಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೆ ಒಳಗಾದ ಅಪರಾಧಿ. 2019ರ ಅ. 8ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಅವರೊಂದಿಗೆ ಮೊಬೈಲ್ ಬಳಸುವ ವಿಚಾರದಲ್ಲಿ ಮಾತುಕತೆ ನಡೆಸುವ ವೇಳೆ ಕೋಪಗೊಂಡು ಸುತ್ತಿಗೆಯಿಂದ ಆಕೆಯ ತಲೆಗೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆ ಮೃತಪಟ್ಟ ಬಳಿಕ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದಾಗಿ ಪ್ರಕರಣದಲ್ಲಿ ಆರೋಪಿಸಲಾಗಿತ್ತು.
ಸ್ವೀಡಲ್ ಕುಟಿನ್ಹಾ ಅವರ ತಂದೆ ಫ್ರಾನ್ಸಿಸ್ ಕುಟಿನ್ಹಾ ಅವರು ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಮಂಗಳೂರು ದಕ್ಷಿಣ ವಿಭಾಗದ ಅಂದಿನ ಎಸಿಪಿ ಟಿ. ಕೋದಂಡ ರಾಮ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 2 ನೇ ಹೆಚ್ಚುವರಿ ಜಿಲ್ಲಾ ಮತ್ತುಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆ.24 ರಂದು ನ್ಯಾಯಾಲಯವು ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾಗೆ ಐಪಿಸಿ ಕಲಂ 304 (ಜಿಜಿ) ಗೆ 4 ವರ್ಷ ಸಜೆ ಮತ್ತು 10,000 ರೂ. ದಂಡ , ಐಪಿಸಿ ಕಲಂ 201ರಡಿ 1 ವರ್ಷ ಸಜೆ ಮತ್ತು 1,000 ರೂ. ದಂಡವನ್ನು ವಿಧಿಸಿದೆ.
ಅಭಿಯೋಜನಾ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಜ್ಯೋತಿ ಪ್ರಮೋದ ನಾಯಕ್ ವಾದಿಸಿದ್ದರು.