jail 
ದಕ್ಷಿಣ ಕನ್ನಡ

ವಂಚನೆ ಅಪರಾಧಿ ಮಹಿಳೆಗೆ 3 ವರ್ಷ ಜೈಲು

ಪತಿಯೊಂದಿಗೆ ಸೇರಿ ಆಸ್ತಿ ಕಬಳಿಕೆ ಯತ್ನ ಪ್ರಕರಣ

ಪುತ್ತೂರು ಗ್ರಾಮಾಂತರ: ಕೊಳ್ತಿಗೆ ಗ್ರಾಮದಲ್ಲಿ 17 ವರ್ಷಗಳ ಹಿಂದೆ ನಡೆದಿದ್ದ ನಕಲಿ ದಾಖಲೆ ಸೃಷ್ಟಿಸಿ 4.71 ಎಕ್ರೆ ಆಸ್ತಿ ಕಬಳಿಸಲು ಯತ್ನಿಸಿದ ವಂಚನಾ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿ ಮಹಿಳೆಗೆ ಪುತ್ತೂರಿನ ಎಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕೊಳ್ತಿಗೆ ಗ್ರಾಮದಲ್ಲಿ, ಆ ವೇಳೆ ಬೆಂಗಳೂರಿನಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಷಪ್ಪ ಗೌಡ ಎಂಬುವರ ಒಟ್ಟು 4.71 ಎಕ್ರೆ ಆಸ್ತಿ ಕಬಳಿಸಲು ರುಕ್ಮಯ್ಯ ಗೌಡ, ಆತನ ಪತ್ನಿ ಮಹಾಲಕ್ಷ್ಮೀ ಮತ್ತು ಆಕೆಯ ಅಣ್ಣ ಶಿವರಾಮ ಗೌಡ ಸಂಚು ರೂಪಿಸಿ ಪುತ್ತೂರಿನ ಉಪ ನೋಂದಣಿ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದರು. ಮಹಾಲಕ್ಷ್ಮೀ ತಾನೇ ‘ಮಾನಕ್ಕ’ ಎಂಬಂತೆ ಹಾಗೂ ಶಿವರಾಮ ಗೌಡ ತಾನೇ ‘ಶೇಷಪ್ಪ ಗೌಡ’ ಎಂದು ನಟಿಸಿ ಖೋಟಾ ಸಹಿ ಮತ್ತು ನಕಲಿ ದಾಖಲೆಗಳ ಮೂಲಕ ಒಂದನೇ ರುಕ್ಮಯ್ಯ ಗೌಡ ಅವರ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದರು.

ಈ ಬಗ್ಗೆ ಶೇಷಪ್ಪ ಗೌಡ ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಸಂಪ್ಯ ಪೊಲೀಸ್ ಠಾಣೆಯ ಎಸ್‌ಐ ಆನಂದ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ 1ನೇ ಆರೋಪಿಯಾಗಿದ್ದ ರುಕ್ಮಯ್ಯ ಗೌಡ ಮತ್ತು 3ನೇ ಆರೋಪಿಯಾಗಿದ್ದ ಶಿವರಾಮ ಗೌಡ ಮೃತಪಟ್ಟಿದ್ದು, ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಎಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದೇವರಾಜ್ ವೈ.ಎಚ್. ಮಹಾಲಕ್ಷ್ಮೀಗೆ ಶಿಕ್ಷೆ, ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ವಾದಿಸಿದ್ದರು.