ಕುಂಬಳೆ: ರಾಜ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಮತ್ತು ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಮೋಟಾರು ವಾಹನ ಇಲಾಖೆಯು 24 ಗಂಟೆಗಳ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಹೊಸ ಯೋಜನೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಯ ಸುಮಾರು 100 ಕಿ.ಮೀ. ವ್ಯಾಪ್ತಿಯ ಪ್ರತಿ ಆರು ಜಾರಿ ವಲಯ(ಎನ್ಫೋರ್ಸ್‌ಮೆಂಟ್ ಜೋನ್)ಗಳಲ್ಲಿ ವಿಶೇಷ ಕಾರ್ಯಪಡೆಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಮೋಟಾರು ವಾಹನ ನಿರೀಕ್ಷಕರು ಮತ್ತು ಸಹಾಯಕ ಮೋಟಾರು ವಾಹನ ನಿರೀಕ್ಷಕರು ಹಗಲು, ಸಂಜೆ ಹಾಗೂ ರಾತ್ರಿ ಪಾಳಿಗಳಲ್ಲಿ ಸರದಿ ಆಧಾರದ ಮೇಲೆ ನಿರಂತರ ಗಸ್ತು ಮತ್ತು ತಪಾಸಣೆ ನಡೆಸಲಿದ್ದಾರೆ.
ಕಚೇರಿ ಹಾಗೂ ವಲಯವಾರು ವಿಭಾಗಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುವಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಾದೇಶಿಕ ಆಡಳಿತ ವ್ಯಾಪ್ತಿಯನ್ನು ವಿಂಗಡಿಸಲಾಗಿದೆ: ತಿರುವನಂತಪುರಂ ಉಪ ಸಾರಿಗೆ ಆಯುಕ್ತರ ವ್ಯಾಪ್ತಿ 200 ಕಿ.ಮೀ., ತ್ರಿಶ್ಯೂರ್ ಕೇಂದ್ರ ವಲಯ 100 ಕಿ.ಮೀ., ಎರ್ನಾಕುಲಂ ಕೇಂದ್ರ ವಲಯ 100 ಕಿ.ಮೀ. ಹಾಗೂ ಕೋಝಿಕ್ಕೋಡ್ ಉತ್ತರ ವಲಯ 200 ಕಿ.ಮೀ. ವಲಯಗಳಾಗಿ ವಿಂಗಡಿಸಲಾಗಿದೆ.
ನಿಯಮ ಉಲ್ಲಂಘನೆಗೆ ಹದ್ದಿನ ಕಣ್ಣು: ಅತಿಯಾದ ವೇಗ, ಅಪಾಯಕಾರಿ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ, ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸದೆ ಚಾಲನೆ ಪತ್ತೆಹಚ್ಚುವುದು ಈ ತಪಾಸಣಾ ತಂಡಗಳ ಮುಖ್ಯ ಆದ್ಯತೆಯಾಗಿದೆ. ಇದರೊಂದಿಗೆ, ನಿಗದಿತ ಮಿತಿಗಿಂತ ಹೆಚ್ಚು ಸರಕು ಸಾಗಣೆ (ಓವರ್‌ಲೋಡ್), ವಾಹನಗಳ ಅನಧಿಕೃತ ಮಾರ್ಪಾಡು, ಫಿಟ್‌ನೆಸ್ ಪ್ರಮಾಣಪತ್ರ, ಪರವಾನಗಿ, ವಿಮೆ ಹಾಗೂ ತೆರಿಗೆ ದಾಖಲೆಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಯಲಿದೆ. ದ್ವಿಚಕ್ರ ವಾಹನಗಳಲ್ಲಿ ನಡೆಸುವ ಅಪಾಯಕಾರಿ ಸಾಹಸ ಪ್ರದರ್ಶನಗಳು (ಸ್ಟಂಟ್) ಮತ್ತು ಅನಧಿಕೃತ ದೀಪಗಳ (ಎಲ್‌ಇಡಿ/ಫ್ಲಾೃಶ್ ಟೈಲ್) ಬಳಕೆಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಲು ತಂಡಕ್ಕೆ ಸೂಚಿಸಲಾಗಿದೆ.
ಒಂದೇ ಸ್ಥಳದಲ್ಲಿ ಸುದೀರ್ಘ ಸಮಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವ ಬದಲಿಗೆ, ಹೆದ್ದಾರಿಯುದ್ದಕ್ಕೂ ನಿರಂತರವಾಗಿ ಚಲಿಸುತ್ತಾ ವಿವಿಧ ಭಾಗಗಳಲ್ಲಿ ‘ಫ್ಲಾೃಶ್ ತಪಾಸಣೆ’ ನಡೆಸಲು ನಿರ್ಧರಿಸಲಾಗಿದೆ. ಅಗತ್ಯವಿದ್ದಲ್ಲಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುವುದು. ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ.
ವಾಹನ ತಪಾಸಣೆಯ ಜತೆಗೆ ಈ ಪಡೆಗಳಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಲಾಗಿದೆ. ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗುವುದು. ಅಪಘಾತಕ್ಕೀಡಾದ ಅಥವಾ ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಯುಂಟುಮಾಡುವ ವಾಹನಗಳನ್ನು ತಕ್ಷಣ ತೆರವುಗೊಳಿಸುವುದು. ಬ್ಲಾೃಕ್ ಸ್ಪಾಟ್(ಅಪಘಾತ ವಲಯ)ಗಳನ್ನು ಗುರುತಿಸಿ ಅಗತ್ಯ ಮೂಲಸೌಕರ್ಯ ಸುಧಾರಣೆಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರಿಂಗ್ ವಿಭಾಗಕ್ಕೆ ಶಿಫಾರಸ್ಸು ಮಾಡುವುದು.