ಮೊಳಹಳ್ಳಿ ಶಿವರಾವ್ ಅವರ ಆಕರ ಗ್ರಂಥವನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಲೇಖಕ ಅರವಿಂದ ಚೊಕ್ಕಾಡಿ, ಎಸ್.ಆರ್.ಸತೀಶ್ಚಂದ್ರ, ರವಿರಾಜ ಹೆಗ್ಡೆ, ಶಶಿಕುಮಾರ್ ರೈ ಬಾಲ್ಯೊಟ್ಟು ಮೊದಲಾದವರಿದ್ದರು.
ಕರಾವಳಿ ಭಾಗದಲ್ಲಿ ಸಹಕಾರಿ ಕ್ಷೇತ್ರವು ಬಲಿಷ್ಠವಾಗಿ ಬೆಳೆಯಲು ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾವ್ ಅವರ ದೂರದೃಷ್ಟಿ, ಮಾರ್ಗದರ್ಶನ ಹಾಗೂ ಪರಿಶ್ರಮವೇ ಕಾರಣ. ಸಹಕಾರಿ ಚಳವಳಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯವಾಗಿದ್ದು, ಇಂದು ಸಹಕಾರಿ ಸಂಸ್ಥೆಗಳು ಜನರ ವಿಶ್ವಾಸವನ್ನು ಗಳಿಸಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಿದ ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾವ್ ಅವರ 146ನೇ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊಳಹಳ್ಳಿ ಶಿವರಾವ್ ಅವರು ಸಹಕಾರಿ ಚಳವಳಿಯನ್ನು ಜನಸಾಮಾನ್ಯರ ಜೀವನದೊಂದಿಗೆ ಬೆಸೆದು, ಗ್ರಾಮೀಣ ಆರ್ಥಿಕತೆಗೆ ಬಲ ತುಂಬುವ ಮಹತ್ತರ ಕಾರ್ಯವನ್ನು ಕೈಗೊಂಡಿದ್ದರು. ಅವರ ದೂರದೃಷ್ಟಿಯಿಂದ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ಗಳು ಜಿಲ್ಲೆಯಲ್ಲಿ ದೃಢವಾಗಿ ನೆಲೆನಿಂತು, ಕೃಷಿಕರು, ಸಣ್ಣ ವ್ಯಾಪಾರಿಗಳು ಮತ್ತು ವಿವಿಧ ವರ್ಗದ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅವರು ಹೇಳಿದರು.
ಜಿಲ್ಲೆಯ ಕೃಷಿ ಮತ್ತು ವ್ಯಾಪಾರ ಕ್ಷೇತ್ರಗಳ ಬೆಳವಣಿಗೆಗೆ ಸಹಕಾರಿ ಕ್ಷೇತ್ರವೇ ಮೂಲ ಆಧಾರವಾಗಿದೆ. ರೈತರಿಗೆ ಸಮಯೋಚಿತ ಸಾಲ ಸೌಲಭ್ಯ, ಉಳಿತಾಯದ ಅಭ್ಯಾಸ ಬೆಳೆಸುವುದು ಹಾಗೂ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದು ದೇಶದ ಅನೇಕ ರಾಷ್ಟ್ರೀಯ ಬ್ಯಾಂಕ್‌ಗಳು ವಿಲೀನ ಪ್ರಕ್ರಿಯೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ, ಸಹಕಾರಿ ಬ್ಯಾಂಕ್‌ಗಳು ಉತ್ತಮ ಆಡಳಿತ, ಜನಸ್ನೇಹಿ ಸೇವೆ ಮತ್ತು ಆರ್ಥಿಕ ಶಿಸ್ತಿನ ಮೂಲಕ ಗರಿಷ್ಠ ಲಾಭ ಗಳಿಸಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಯಶಸ್ಸಿನ ಹಿಂದೆ ಮೊಳಹಳ್ಳಿ ಶಿವರಾವ್ ಅವರು ರೂಪಿಸಿದ ಸಹಕಾರಿ ತತ್ವಗಳು ಮತ್ತು ಮೌಲ್ಯಗಳೇ ಪ್ರಮುಖ ಕಾರಣ ಎಂದು ಅವರು ಸ್ಮರಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮುಖ್ಯ ಅತಿಥಿಯಾಗಿದ್ದರು. ಹಿರಿಯರ ತಪಸ್ಸಿನ ಫಲವಾಗಿ ಸಹಕಾರಿ ಕ್ಷೇತ್ರ ಮಾದರಿಯಾಗಿ ಬೆಳೆದು ನಿಂತಿದೆ. ದಿ.ಮೊಳಹಳ್ಳಿ ಶಿವರಾವ್ ಅವರ ಬಗ್ಗೆ ಬರೆದಿರುವ ಪುಸ್ತಕ ಎಲ್ಲರ ಮನೆಗಳಿಗೆ ತಲುಪಬೇಕು. ಮುಂದಿನ ಪೀಳಿಗೆಗೆ ಅವರ ಪರಿಚಯವಾಗಿ ಅವರ ನೆನಪು ಚಿರಸ್ಥಾಯಿಯಾಗಿರಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅತಿಥಿಯಾಗಿದ್ದರು. ಇಂದು ಕರ್ನಾಟಕದಲ್ಲಿ ಸಹಕಾರಿ ಬ್ಯಾಂಕುಗಳು, ಕೃಷಿ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಂಘಗಳು ಹಾಗೂ ವಿವಿಧ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಮೊಳಹಳ್ಳಿ ಶಿವರಾವ್ ಅವರಂತಹ ಮಹನೀಯರ ದೂರದೃಷ್ಟಿ ಮತ್ತು ಸೇವಾ ಮನೋಭಾವವೇ ಬುನಾದಿಯಾಗಿದೆ ಎಂದರು.
ಬರಹಗಾರ ಅರವಿಂದ ಚೊಕ್ಕಾಡಿ ಅವರು ಬರೆದ ಮೊಳಹಳ್ಳಿ ಶಿವರಾವ್ ಅವರ ಆಕರ ಗ್ರಂಥವನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಚೊಕ್ಕಾಡಿ, ಮೊಳಹಳ್ಳಿಯವರದು ಕಡಿಮೆ ಮಾತು. ಅದರಲ್ಲಿ ಹೆಚ್ಚಿನ ವಿಷಯಗಳನ್ನು ಹೇಳುತ್ತಿದ್ದರು. ಪ್ರಯೋಗಶೀಲತೆ ಮತ್ತು ಆವಿಷ್ಕಾರ ಪ್ರವೃತ್ತಿಯನ್ನು ಹೊಂದಿದ್ದ ಅವರು ಸಹಕಾರಿ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದರು. ಶೋಷಿತ ಸಮುದಾಯದ ಅಭ್ಯುದಯಕ್ಕೆ ಅವರ ಕೊಡುಗೆ ಗಮನಾರ್ಹ. ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಅವರ ಪ್ರಯತ್ನ ಮಹತ್ತರ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಮಹೇಶ್ ಹೆಗ್ಡೆ ಎಂ, ಅಶೋಕ್ ಕುಮಾರ್ ಶೆಟ್ಟಿ, ಜೈರಾಜ್ ಬಿ. ರೈ, ಎಸ್.ಬಿ. ಜಯರಾಮ್ ರೈ, ರಾಜೇಶ್ ರಾವ್ , ಮೋನಪ್ಪ ಶೆಟ್ಟಿ ಎಕ್ಕಾರು, ಕುಶಾಲಪ್ಪ ಗೌಡ, ಎಸ್.ಎನ್.ಮನ್ಮಥ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ದಿ.ಮೊಳಹಳ್ಳಿ ಶಿವರಾವ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಷನೆಗೈದು ಗೌರವ ಸಲ್ಲಿಸಲಾಯಿತು. ಸಹಕಾರಿಗಳ ಪ್ರತಿಜ್ಞಾ ವಿಧಿಯನ್ನು ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ನಡೆಸಿಕೊಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ವಂದಿಸಿದರು. ಬ್ಯಾಂಕ್ ಸಿಬ್ಬಂದಿ ರಾಜೀವ್ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.