Mann Ki Baat | ಪ್ರಧಾನಿ ನರೇಂದ್ರ ಮೋದಿ
ದೆಹಲಿ/ಬೆಂಗಳೂರು: ಕಳೆದ ಒಂದು ದಶಕದಿಂದ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್ ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಇಂದು ಕೂಡ (ನ.30) ತಮ್ಮ ಮನದ ಮಾತನ್ನು ದೇಶದ ಜನರ ಮುಂದೆ ಹಂಚಿಕೊಂಡಿದ್ದು, ಈ ವೇಳೆ ಕರ್ನಾಟಕದ ಜೇನಿನ ಸಿಹಿಯನ್ನು, ತಮ್ಮ ಮಾತಿನ ಮೂಲಕ ರಾಷ್ಟ್ರದ ಜನರು ಸವಿಯುವಂತೆ ಮಾಡಿದ್ದಾರೆ.
ಮನ್ ಕಿ ಬಾತ್ನ 128 ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ, ಅಲ್ಲಿನ ಸಸ್ಯವರ್ಗವು ಜೇನುತುಪ್ಪ ಉತ್ಪಾದನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದ್ದು. ಇಲ್ಲಿ ಗ್ರಾಮಜನ್ಯ ಎಂಬ ರೈತ ಸಂಘಟನೆ ಪ್ರಕೃತಿಯ ಈ ಕೊಡುಗೆಗೆ ಹೊಸ ದಿಕ್ಕನ್ನು ನೀಡುತ್ತಿದೆ ಎಂದರು.
ಗ್ರಾಮಜನ್ಯ ಸಂಘಟನೆ ಆಧುನಿಕ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಪ್ರಯೋಗಾಲಯ, ಬಾಟಲ್, ಸಂಗ್ರಹಣೆ ಮತ್ತು ಡಿಜಿಟಲ್ ಟ್ರ್ಯಾಕಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ. ಸದ್ಯ ಈ ಜೇನುತುಪ್ಪವು ಗ್ರಾಮೀಣ ಭಾಗಗಳಿಂದ, ನಗರ ಪ್ರದೇಶಕ್ಕೆ ತಲುಪುತ್ತಿದೆ. ಎರಡೂವರೆ ಸಾವಿರಕ್ಕೂ ಹೆಚ್ಚು ರೈತರು ಈ ವಿಶಿಷ್ಟ ಪ್ರಯತ್ನದ ಲಾಭ ಪಡೆದಿದ್ದಾರೆ. ರಾಜ್ಯದ ತುಮಕೂರು ಜಿಲ್ಲೆಯ ಶಿವಗಂಗಾ ಕಲಾಂಜಿಯ ಎಂಬ ಸಂಸ್ಥೆಯ ಪ್ರಯತ್ನವನ್ನು ಸಹ ಶ್ಲಾಘಿಸಿರುವ ಪ್ರಧಾನಿಗಳು, ಆರಂಭದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಎರಡು ಜೇನುನೊಣ ಪೆಟ್ಟಿಗೆಗಳನ್ನು ಒದಗಿಸಲಾಗಿದೆ. ಹಾಗೆ ಮಾಡುವುದರಿಂದ, ಈ ಸಂಸ್ಥೆಯು ಅನೇಕ ರೈತರನ್ನು ತನ್ನ ಅಭಿಯಾನಕ್ಕೆ ಸಂಪರ್ಕಿಸಿದೆ. ಈಗ, ಈ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ರೈತ ಸಮೂಹ ಜಂಟಿಯಾಗಿ ಜೇನುತುಪ್ಪವನ್ನು ಹೊರತೆಗೆದು, ಅದನ್ನು ಪ್ಯಾಕ್ ಮಾಡಿ ಸ್ಥಳೀಯ ಮಾರುಕಟ್ಟೆಗೆ ತಲುಪಿಸುತ್ತಿದೆ.
ಇಂದು ದೇಶ ಜೇನು ಉತ್ಪಾದನೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದು, 11 ವರ್ಷಗಳ ಹಿಂದೆ, ದೇಶದಲ್ಲಿ ಜೇನು ಉತ್ಪಾದನೆಯು 76 ಸಾವಿರ ಮೆಟ್ರಿಕ್ ಟನ್‌ಗಳಷ್ಟಿತ್ತು. ಈಗ ಅದು 1.5 ಲಕ್ಷ ಮೆಟ್ರಿಕ್ ಟನ್‌ಗಳಿಗೂ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಜೇನು ರಫ್ತು ಕೂಡ ಮೂರು ಪಟ್ಟು ವೃದ್ದಿಯಾಗಿದೆ. ಜೇನು ಮಿಷನ್ ಕಾರ್ಯಕ್ರಮದಡಿಯಲ್ಲಿ, ಖಾದಿ ಗ್ರಾಮೋದ್ಯೋಗವು 2.25 ಲಕ್ಷಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ಜನರಲ್ಲಿ ವಿತರಿಸಿದೆ. ಇದು ಸಾವಿರಾರು ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಿದೆ... ಅಂದರೆ, ದೇಶದ ಅಸಂಖ್ಯಾತ ಮೂಲೆಗಳಲ್ಲಿ ಜೇನುತುಪ್ಪದ ಮಾಧುರ್ಯ ಹೆಚ್ಚುತ್ತಿದೆ. ಮತ್ತು ಈ ಮಾಧುರ್ಯವು ರೈತರ ಆದಾಯವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು(ಏಜೆನ್ಸೀಸ್).