ಅಂತರ್ವಲಯ ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್‌ನಲ್ಲಿ ವಿಜೇತರಾದ ಉಜಿರೆ ಎಸ್‌ಡಿಎಂ ಕಾಲೇಜಿನ ತಂಡ. 
ದಕ್ಷಿಣ ಕನ್ನಡ

ಅಂತರ್ವಲಯ ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ : ಉಜಿರೆ ಎಸ್‌ಡಿಎಂ ಕಾಲೇಜು ಚಾಂಪಿಯನ್

ಬೆಳ್ತಂಗಡಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಾವಣಗೆರೆ ಜೆಜೆ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಅಂತರ್ವಲಯ ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಮಹಿಳೆಯರ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.

ಚಾಂಪಿಯನ್‌ಗಳಾಗಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ತಂಡ ಸೆಮಿ ಫೈನಲ್ ಪಂದ್ಯಾಟದಲ್ಲಿ ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜು ತಂಡವನ್ನು 3-0 ಅಂಕಗಳ ಅಂತರದಿಂದ ಪರಾಜಯಗೊಳಿಸಿತು. ಬಳಿಕ ಫೈನಲ್ ಪಂದ್ಯಾಟದಲ್ಲಿ ಕಲಬುರಗಿಯ ಆರ್‌ಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜು ತಂಡವನ್ನು 3-1 ಸೆಟ್‌ಗಳಿಂದ ಮಣಿಸಿ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಮೂಡಿಬಂದರು.

ಈ ಮೂಲಕ ಉತ್ತಮ ಪ್ರದರ್ಶನ ತೋರಿದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಎರಡು ವಿದ್ಯಾರ್ಥಿನಿಯರಾದ ಇಶಾನಿ, ಮೇದಿನಿ ರಾಷ್ಟ್ರೀಯ ದಕ್ಷಿಣ ಭಾರತ ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ. ಇವರಿಗೆ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಕಾಲೇಜು ಅಭಿನಂದನೆ ತಿಳಿಸಿದ್ದಾರೆ.