ರಬ್ಬರ್ ಕೃಷಿಕರ ಸಮಸ್ಯೆ ಬಗ್ಗೆ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು. 
ದಕ್ಷಿಣ ಕನ್ನಡ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ, ರಬ್ಬರ್ ಕೃಷಿಕರ ಸಮಸ್ಯೆ ಗಂಭೀರ ವಿಷಯವಾಗಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಹಿಂದಿನ ಸರ್ಕಾರಗಳು ರಬ್ಬರ್ ಕೃಷಿಗೆ ನೀಡಿದ ಪ್ರೋತ್ಸಾಹದಿಂದ ನಮ್ಮ ರಾಜ್ಯದಲ್ಲಿಯೂ ಕೃಷಿಕರು ವಾಣಿಜ್ಯ ಬೆಳೆಯಾಗಿ ರಬ್ಬರ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ರಬ್ಬರ್ ಆದಾಯ ಕೃಷಿ ಖರ್ಚು ವೆಚ್ಚ ಸರಿದೂಗಿಸದೆ ಇದ್ದು ಅವಲಂಬಿತ ಕೃಷಿಕರು ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ವಿವರಿಸಲಾಯಿತು. ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಸರ್ಕಾರವನ್ನು ಬೆಳೆಗಾರರ ಪರವಾಗಿ ಒತ್ತಾಯಿಸಲು ವಿನಂತಿಸಲಾಯಿತು.

ಈ ತಿಂಗಳ ಕೊನೆ ವಾರದಲ್ಲಿ ಉಜಿರೆಯಲ್ಲಿ ನಡೆಯುವ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಸಚಿವರು ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹಾರದ ಕುರಿತು ತಕ್ಷಣ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.