ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ 21ನೇ ವಾರ್ಷಿಕೋತ್ಸವದ ದ್ವಿತೀಯ ದಿನದ ಸಭಾಕಾರ್ಯಕ್ರಮದಲ್ಲಿ ಅಶೋಕ್ ಎಸ್.ಸುವರ್ಣ ಮಾತನಾಡಿದರು. 
ದಕ್ಷಿಣ ಕನ್ನಡ

ವಿದ್ಯಾರ್ಥಿ ಜೀವನದ ಶಿಸ್ತಿನಿಂದ ಜೀವನ ಉನ್ನತಿ : ಅಶೋಕ್ ಎಸ್.ಸುವರ್ಣ ಬಣ್ಣನೆ

ಮೂಲ್ಕಿ: ವಿದ್ಯಾರ್ಥಿ ಜೀವನದಲ್ಲಿ ಕಲಿತ ಶಿಸ್ತು, ಸಂಸ್ಕಾರವು ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಉನ್ನತಿ ಗಳಿಸಲು ಸಹಕಾರ ನೀಡುತ್ತದೆ ಎಂದು ಮುಂಬೈ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್ ಎಸ್.ಸುವರ್ಣ ಹೇಳಿದರು.

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತದ ಕಿಲ್ಪಾಡಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ 21ನೇ ವಾರ್ಷಿಕೋತ್ಸವದ ದ್ವಿತೀಯ ದಿನದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಂಕಣ ರೈಲ್ವೆ ಜೂನಿಯರ್ ಇಂಜಿನಿಯರ್ ಲಿಖಿತಾ ಬಂಗೇರ ಮಾತನಾಡಿ, ಶಾಲೆಯಲ್ಲಿ ಪಡೆದ ತರಬೇತಿಯಿಂದ ಉತ್ತಮ ಸಾಧನೆಗೈಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಬೇಕು ಎಂದರು.

ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಸಂಚಾಲಕ ಎಂ.ಪಾಂಡುರಂಗ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ, ಕಾರ್ಯದರ್ಶಿ ಎಚ್.ರಾಮದಾಸ ಕಾಮತ್, ಸದಸ್ಯ ವಿ. ಹರಿಕಾಮತ್, ಪ್ರಾಂಶುಪಾಲೆ ಕಾಮಾಕ್ಷಿ ನಾಯಕ್ ಉಪಸ್ಥಿತರಿದ್ದರು.

ಜಯಲಕ್ಷ್ಮೀ ಸ್ವಾಗತಿಸಿದರು. ಕಾಮಾಕ್ಷಿ ನಾಯಕ್ ವರದಿ ಮಂಡಿಸಿದರು. ಶ್ರೀಲಕ್ಷ್ಮೀ ಕಾಮತ್ ಮತ್ತು ಅಮಿತಾ ಕೆ.ನಿರೂಪಿಸಿ, ಶೈಲಜಾ ವಂದಿಸಿದರು.