ಜಿಲ್ಲೆ

ತರಕಾರಿ ಬೆಳೆಗಾರರಿಗೆ ದಕ್ಕದ ಪರಿಹಾರ, ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಬೆಳೆಗಾರ ತರಕಾರಿ ಬೆಳೆಗೆ ಇನ್ನೂ ನಡೆಯದ ಸಮೀಕ್ಷೆ

Bengaluru Rural

ವಿ.ಮಂಜುನಾಥ್ ಸೂಲಿಬೆಲೆ

ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ್ದ ಹೂವು ಬೆಳೆಗಾರರಿಗೆ ಸರ್ಕಾರ ಪರಿಹಾರಧನ ಘೋಷಿಸಿದೆಯಾದರೂ ಕೆಲ ಮಾನದಂಡಗಳನ್ನು ತಿಳಿಸಿದೆ. ಆದರೆ ತರಕಾರಿ ಬೆಳೆಗಾರರಿಗೂ ಪರಿಹಾರ ೋಷಿಸಿದ್ದು, ಯಾವ ಮಾನದಂಡದ ಮೇಲೆ ನೀಡಬೇಕು ಎಂದು ನಿರ್ಧರಿಸಿಲ್ಲ. ಇದರಿಂದ ರೈತರು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ.

ಹೊಸಕೋಟೆ ತಾಲೂಕಿನಾದ್ಯಂತ ಅಂದಾಜು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತರಕಾರಿ ಬೆಳೆ ಬೆಳೆಯಲಾಗಿದೆ. ಕರೊನಾ ಸಂದರ್ಭದಲ್ಲಿ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತರಕಾರಿಗಳನ್ನು ರಸ್ತೆಗೆ ಚೆಲ್ಲಿರುವ ನಿದರ್ಶನಗಳೂ ಇವೆ.

ಸರ್ಕಾರ ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ನೀಡುವಂತೆ ತರಕಾರಿ ಬೆಳೆಗಾರರಿಗೂ 15 ಸಾವಿರ ರೂ. ಪರಿಹಾರ ನೀಡುವ ಬಗ್ಗೆ ಆದೇಶ ಹೊರಡಿಸಿದೆ. ಆದರೆ ಲಾನುಭವಿಗಳ ಆಯ್ಕೆಗೆ ಅನುಸರಿಸಬೇಕಾದ ಮಾನದಂಡ ಸೂಚಿಸಿಲ್ಲ. ಇದರ ನಡುವೆ ಜೂನ್ ಮೊದಲ ವಾರದಲ್ಲೆ ಮುಂಗಾರು ಆರಂಭ ಆಗಲಿರುವುದರಿಂದ ಬೆಳೆ ತೆಗೆದು ಭೂಮಿ ಹದ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ತರಕಾರಿ ಬೆಳೆಗಾರರಿಂದ ಅರ್ಜಿ ಸ್ವೀಕಾರ ಮಾಡದ ಇಲಾಖೆಗಳು ಯಾವ ರೀತಿ ಸಮೀಕ್ಷೆ ಮಾಡುತ್ತವೆ ಎಂಬುದೇ ಪ್ರಶ್ನೆಯಾಗಿದೆ.

ಪ್ರತಿವರ್ಷ ಹಿಂಗಾರು ಹಾಗೂ ಬೇಸಿಗೆಯಲ್ಲಿ ಬೆಳೆ ಸಮೀಕ್ಷೆ ನಡೆಸುತ್ತೇವೆ. ಆದರೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿಲ್ಲ. ಹೂವು ಬೆಳೆ ವರ್ಷಗಳ ಕಾಲ ಇರುವ ಕಾರಣ ಕಳೆದ ಸಲ ಮಾಡಿದ ಸಮೀಕ್ಷೆ ಆಧಾರದ ಮೇಲೆ ಪರಿಹಾರ ಘೋಷಣೆ ಮಾಡಿದೆ. ಆದರೆ ತರಕಾರಿ ಬೆಳೆ 3 ತಿಂಗಳಿಗೊಮ್ಮೆ ಬದಲಾವಣೆ ಆಗುವುದರಿಂದ ಯಾವ ಮಾನದಂಡ ಆಧರಿಸಿ ಪರಿಹಾರ ನೀಡಬೇಕು ಎಂಬ ಬಗ್ಗೆ ಸರ್ಕಾರದ ಆದೇಶ ಆಗಿಲ್ಲ. ಸರ್ಕಾರದ ಮುಂದಿನ ಆದೇಶದನ್ವಯ ಪರಿಹಾರ ನೀಡಲಾಗುವುದು. ಪ್ರಶಾಂತ್, ತೋಟಗಾರಿಕೆ ಇಲಾಖೆ ನಿರ್ದೇಶಕ, ಹೊಸಕೋಟೆ