ಜಿಲ್ಲೆ

ಹಣದಿಂದ ಎಲ್ಲವನ್ನೂ ಗಳಿಸಲು ಸಾಧ್ಯವಿಲ್ಲ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಹಣದಿಂದ ಎಲ್ಲವನ್ನು ಗಳಿಸಲು ಸಾಧ್ಯವಿಲ್ಲ. ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ಮೈಸೂರಿನ ಉದ್ಯಮಿ ಸದಾಶಿವ ಅಮಿನ್​ ಹೇಳಿದರು.

ನಗರದ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಮಿತ್ರ ವೃಂದದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ರಾಧಾ ಕೃಷ್ಣ ವೇಷ ಭೂಷಣ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಮತ್ತು ಸಾಂಸತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಭಾಗದ ಜನರು ಹೊಟ್ಟೆ ಪಾಡಿಗಾಗಿ ಇಡೀ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ.ಅಲ್ಲಿಯೇ ದಕ್ಷಿಣ ಕನ್ನಡ ಮಿತ್ರ ವೃಂದವನ್ನು ರಚಿಸಿಕೊಂಡು ಒಗ್ಗಟ್ಟು ಕಾಪಾಡಿಕೊಳ್ಳುವುದರ ಜತೆಗೆ ಸಮುದಾಯದ ರಕ್ಷಣೆ, ಬೆಳವಣಿಗಗೂ ಸಹಕಾರಿಯಾಗಿದ್ದೇವೆ. ದಕ್ಷತೆ,ಪ್ರಾಮಾಣಿಕತೆ ಮತ್ತು ಪರಿಶ್ರಮ ಎಂಬ ಮೂರು ಮಂತ್ರಗಳನ್ನು ಮೈಗೂಡಿಸಿಕೊಂಡು ಎಲ್ಲಾ ರಂಗದಲ್ಲಿಯೂ ಮುನ್ನೆಡೆಯುತ್ತಿರುವುದು ವಿಶೇಷವೆನಿಸಿದೆ ಎಂದರು.

ತುಮಕೂರು ಜಿಲ್ಲೆಗೆ ಶೈಕ್ಷಣಿಕನಾಡು ಎಂಬ ಹೆಸರಿದೆ. ಇಲ್ಲಿ ಓದುತ್ತಿರುವ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬ ನಂಬಿಕೆ ನಮ್ಮದು. ಇದರ ಸದುಪಯೋಗವನ್ನು ನೀವೆಲ್ಲರೂ ಪಡೆದುಕೊಳ್ಳಬೇಕು. ಹಿರಿಯ ಸದಸ್ಯರಿಗೆ ಸನ್ಮಾನ ಮಾಡಿರುವುದು ಆದರ್ಶಪ್ರಾಯವೆನಿಸಿದೆ. ಹಿರಿಯರನ್ನು ಗೌರವದಿಂದ ನೋಡಿಕೊಳ್ಳಿ. ನಾವು ಮಕ್ಕಳಾಗಿದ್ದಾಗ ಇಂತಹ ಅವಕಾಶಗಳು ಕಡಿಮೆ. ಆದರೆ, ಈಗ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲಾ ರೀತಿಯ ಅವಕಾಶಗಳು ಇವೆ. ತಾವುಗಳು ಕಲೆಯನ್ನು ಬೆಳೆಸಿಕೊಂಡು, ಉಳಿಸಿಕೊಂಡು, ಮುಂದಿನಪೀಳಿಗೆಗೆ ರವಾನಿಸಿ ಎಂದು ಕೆಎಸ್​ ಆಗ್ರೋ ಕೆಮಿಕಲ್ಸ್​ನ ಶಶಿಧರ ಶೆಟ್ಟಿ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೈಗಾರಿಕೋದ್ಯಮಿ ಎಚ್​.ಜಿ.ಚಂದ್ರಶೇಖರ್​, ನನ್ನ ಪ್ರತಿ ಕೆಲಸದಲ್ಲಿಯೂ ನನ್ನ ಧರ್ಮಪತ್ನಿಯ ಪಾಲು ಇದೆ. ಹಾಗಾಗಿಯೇ ದಕ್ಷಿಣ ಕನ್ನಡ ಮಿತ್ರ ವೃಂದ ನಮ್ಮಿಬ್ಬರನ್ನು ಒಟ್ಟಿಗೆ ಸನ್ಮಾನಿಸಿರುವುದು ಅರ್ಥಪೂರ್ಣವೆನಿಸಿದೆ. ಓರ್ವ ಉದ್ಯಮಿಯಾಗಿ ನಾನು ಮಾಡಿದ ಕೆಲಸಗಳನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ನನಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸಿದೆ. ಇಂತಹ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ನನಗೆ ಮತ್ತಷ್ಟು ಪ್ರೇರಣೆಯಾಗಿದೆ ಎಂದರು.

ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಪ್ರತಿಭಾ ಪುರಸ್ಕಾರ, ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದು, ಇದೇ ಮೊದಲ ಬಾರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಹ ಆಯೋಜಿಸಲಾಗಿದೆ. ಕಣ್ಣಿನ ಪೊರೆ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಸಹ ಸಂಘದವತಿಯಿಂದ ಮಾಡಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಮಿತ್ರ ವೃಂದದ ಜಿಲ್ಲಾಧ್ಯಕ್ಷ ಅಮರನಾಥಶೆಟ್ಟಿ ಹೇಳಿದರು.

ಕೃಷ್ಣಾ ಜನ್ಮಾಷ್ಠಮಿ ಅಂಗವಾಗಿ ಏರ್ಪಡಿಸಿದ್ದ ರಾಧಾ ಕೃಷ್ಣ ವೇಷಧಾರಿಗಳ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 2023-&24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ದಕ್ಷಿಣ ಕನ್ನಡ ಮಿತ್ರ ವೃಂದದ ಸದಸ್ಯರುಗಳ ಮಕ್ಕಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ವಿ.ಬಿ.ಮೋರಿಸ್​, ವೈದ್ಯರಾದ ದುರ್ಗಾದಾಸ್​ ಅಸ್ರಣ್ಣ, ದಕ್ಷಿಣ ಕನ್ನಡ ಮಿತ್ರ ವೃಂದದ ಕಾರ್ಯದರ್ಶಿ ವೆಂಕಟೇಶ್​ ಎಂ.ಎಸ್​. ಕಾರಂತ್​, ಉಪಾಧ್ಯಕ್ಷ ಸುಧೀರ್​ ಹೆಗ್ಡೆ, ಖಜಾಂಚಿ ನರಸಿಂಹನಾಯಕ್​, ಜಂಟಿ ಕಾರ್ಯದರ್ಶಿ ಸುಶೀಲಾ ರಮೇಶ್​, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.