ಮಂಗಳೂರು/ಉಡುಪಿ: ಸ್ವಾತಂತ್ರೊೃೀತ್ಸವ ಹಾಗೂ ಬೆಂಗಳೂರಿನಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರು ನಗರಕ್ಕೆ ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್ ಆಗಮಿಸಿದ್ದು, ಕುದ್ರೋಳಿ, ಬಂದರು ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದೆ. ಪೊಲೀಸರು ವಿಮಾನ, ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಕೈಗೊಂಡಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿದ್ದ ಸಿಸಿ ಕ್ಯಾಮರಾಗಳನ್ನು ತಪಾಸಣೆ ನಡೆಸಿ ದುರಸ್ತಿ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಗಳ ಬಗ್ಗೆ ಅವಹೇಳನಕಾರಿ ಸಂದೇಶಗಳ ಬಗ್ಗೆ ನಿಗಾ ಇಡಲಾಗಿದೆ.
ಸಂಶಯಾಸ್ಪದ ವ್ಯಕ್ತಿಗಳ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಗ್ರಾಮೀಣ ಭಾಗಗಳಲ್ಲೂ ಪೊಲೀಸರು ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ವಿಜಯವಾಣಿಯೊಂದಿಗೆ ಮಾತನಾಡಿ, ಸ್ವಾತಂತ್ರೊೃೀತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಕೆಎಸ್‌ಆರ್‌ಪಿ 2 ತುಕಡಿ, ಜಿಲ್ಲಾ ಮೀಸಲು ಪೊಲೀಸ್ ಪಡೆಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಲಾಗುವುದು. ಯಾವ ತಾಲೂಕಿಗೆ ಎಷ್ಟು ಸಿಬ್ಬಂದಿ ಅಗತ್ಯವಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಅದಕ್ಕೆ ತಕ್ಕಂತೆ ಶುಕ್ರವಾರ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಸೈಬರ್ ಕ್ರೈ ಠಾಣೆಯಲ್ಲಿ ಕೇಸು: ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಸಂದೇಶ ಹಾಗೂ ಚಿತ್ರಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದ್ದು, ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಗೂ ಇತರ ಯಾವುದೇ ಮತದ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿ ಅವಹೇಳನ ಮಾಡುವ ವಿಚಾರಗಳನ್ನು ಸೃಷ್ಟಿಸುವುದು, ಹಂಚಿಕೊಳ್ಳುವುದು, ಅಭಿಪ್ರಾಯ ವ್ಯಕ್ತಪಡಿಸುವುದು, ಟೀಕೆ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.