ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ 1ರಲ್ಲಿರುವ ಮೀನುಗಾರ ಮೊಗೇರ ಸಮುದಾಯದ ಒತ್ತಡದಿಂದ ರಾಜ್ಯ ಸರ್ಕಾರ ಅಧ್ಯಯನ ಸಮಿತಿ ರಚಿಸುವ ಮೂಲಕ ತಾನೇ 2010ರಲ್ಲಿ ನೀಡಿದ್ದ ಆದೇಶವನ್ನು ನಿರ್ಲಕ್ಷಿಸಿದೆ. ಎಸ್‌ಸಿ ಎಸ್‌ಟಿ ಆಯೋಗದ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿಸಲು ಅರ್ಹತೆಯಿಲ್ಲದ ಸಮುದಾಯವನ್ನು ಮತ್ತೆ ಪರಿಶಿಷ್ಟ ಜಾತಿಗೆ ಸೇರಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಮೊಗೇರ (ಮೊಗೇರ್) ಸಂಘ ಆರೋಪಿಸಿದೆ.
ಪರಿಶಿಷ್ಟ ಜಾತಿಯ ಮೊಗೇರ ಸಮುದಾಯದವರು ಮೊಲ ಹಿಡಿದು ಜೀವನ ನಡೆಸುವ ಕಸುಬು ಮಾಡಿಕೊಂಡು ಬಂದವರು. ಉ.ಕ. ಜಿಲ್ಲೆಯಲ್ಲಿ ಮೀನುಗಾರ ವೃತ್ತಿ ಮಾಡುತ್ತಿರುವ ಸೇರಿದ ಮೊಗೇರ ಸಮುದಾಯದವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿಯ ಮೊಗೇರರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ನೈಜ ಪರಿಶಿಷ್ಟರ ಸಾಂವಿಧಾನಕ ಹಕ್ಕನ್ನು 1977ರಿಂದ 2010ರವರೆಗೂ ದುರುಪಯೋಗ ಪಡಿಸಿಕೊಂಡಿದ್ದರು. ಸಂಘಟನೆಯ ಪ್ರಬಲ ಹೋರಾಟದ ಪರಿಣಾಮವಾಗಿ 2005ರಲ್ಲಿ ಅಂದಿನ ಸರ್ಕಾರ ಮೈಸೂರು ವಿವಿಯ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಚ್.ಕೆ. ಭಟ್ ನೇತೃತ್ವದ ತಜ್ಞರ ಅಧ್ಯಯನ ಸಮಿತಿ ರಚಿಸಿತ್ತು. 2008ರಲ್ಲಿ ಪ್ರೊ.ಎಚ್.ಕೆ. ಭಟ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸಮಿತಿ ನೀಡಿದ ವರದಿಯಂತೆ ನೈಜ ಮೊಗೇರರು ಅಸ್ಪಶ್ಯರಾಗಿದ್ದು, ಉ.ಕ. ಜಿಲ್ಲೆಯ ಮೀನುಗಾರ ಮೊಗೇರರ ಕುಲಕಸುಬು, ಕುಲದೇವರು, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸ್ಥಿತಿಗತಿ ಎಲ್ಲವೂ ಭಿನ್ನವಾಗಿದೆ. ಉ.ಕ. ಜಿಲ್ಲೆಯ ಮೊಗೇರ ಜಾತಿಯವರು ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ ಸೇರಲ್ಪಟ್ಟವರು. ಪರಿಶಿಷ್ಟ ಜಾತಿಗೆ ಸೇರಿದ ಪ್ರಮಾಣಪತ್ರ ಸರಿಯಲ್ಲ ಎಂದು ಉಲ್ಲೇಖಿಸಿದ್ದು, 2010ರ ಮೇ 25ರಂದು ರಾಜ್ಯ ಸರ್ಕಾರ ವರದಿಯನ್ನು ಅಂಗೀಕರಿಸಿತ್ತು. ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರಗಿಸಲಾಗಿತ್ತು ಎಂದು ರಾಜ್ಯ ಮೊಗೇರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಂದರ ಮೇರ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ ಮಾತನಾಡಿ, ಏಳೆಂಟು ತಿಂಗಳ ಹಿಂದೆ ಈ ಬಗ್ಗೆ ದ.ಕ. ಜಿಲ್ಲಾ ಮೊಗೇರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಸಚಿವ ಅಂಗಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದಾಗ ನ್ಯಾಯವೊದಗಿಸುವ ಭರವಸೆ ನೀಡಲಾಗಿತ್ತು. ಪ್ರಧಾನ ಮಂತ್ರಿಗೂ ಮನವಿಯನ್ನು ಸಲ್ಲಿಸಲಾಗಿತ್ತು. ಹಾಗಿದ್ದರೂ ಇದೀಗ ಮೀನುಗಾರ ಮೊಗೇರರು ರಾಜ್ಯ ಸರ್ಕಾರಕ್ಕೆ ಒತ್ತಡ ತಂದು ಮತ್ತೆ ಸಮಿತಿ ರಚಿಸಲು ಯಶಸ್ವಿಯಾಗಿದ್ದಾರೆ. ಕಾಲಹರಣ ಮಾಡಿ ದುಂದುವೆಚ್ಚಕ್ಕೆ ಕಾರಣವಾಗುವ ಈ ಸಮಿತಿಯ ಔಚಿತ್ಯವೇನು ಎಂದು ಪ್ರಶ್ನಿಸಿ, 2010ರಲ್ಲಿ ಅಂಗೀಕರಿಸಲಾದ ಎಚ್.ಕೆ ಭಟ್ ನೇತೃತ್ವದ ತಂಡದ ವರದಿಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ರಾಜ್ಯ ದಲಿತ ಸಂಘಟನೆಯ ಹಿರಿಯ ಮುಖಂಡರಾದ ಎಂ. ದೇವದಾಸ್, ದಲಿತ ಮುಖಂಡರಾದ ಅಶೋಕ್ ಕೊಂಚಾಡಿ ಉಪಸ್ಥಿತರಿದ್ದರು.