Transparent umbrella under heavy rain against water drops splash background. Rainy weather concept. 
ಜಿಲ್ಲೆ

ದಕ್ಷಿಣ ಕನ್ನಡ ಮಳೆ ತೀವ್ರತೆ ಇಳಿಮುಖ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮಳೆಯ ತೀವ್ರತೆ ಕಡಿಮೆಯಾಗಿತ್ತು. ಹಲವು ದಿನಗಳ ಬಳಿಕ ಬೆಳಗ್ಗೆ ಮತ್ತು ಸಂಜೆಯ ವೇಳೆ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಮಧ್ಯಾಹ್ನ ಹಾಗೂ ಸಂಜೆಯ ವೇಳೆಗೆ ಒಂದೆರಡು ಸಾಧಾರಣ ಮಳೆಯಾಗಿದೆ.


ಬೆಳ್ತಂಗಡಿಯಲ್ಲಿ ಸಾಧಾರಣ ಮಳೆಯಾಗಿದೆ. ಕಡಬದಲ್ಲಿ ಎರಡು ಬಾರಿ ಉತ್ತಮ ಮಳೆಯಾಗಿದೆ. ಉಳಿದಂತೆ ಎಲ್ಲಾ ಕಡೆ ಮಳೆ ಕಡಿಮೆಯಾಗಿತ್ತು. ಜು.10ರಿಂದ 13ರ ತನಕ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆಯಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಹೊನ್ನೇಡಿಯಲ್ಲಿ ನೀರುಪಾಲಾಗಿದ್ದ ನಾರಾಯಣ್ ಎಂಬವರ ಶವ ನದಿಯಲ್ಲಿ ಪೆರಾಜೆಯ ನೆಡ್ಚಿಲ್ ಎಂಬಲ್ಲಿ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಪುಣಚ ಗ್ರಾಮದ ಪರಿಯಲ್ತಡ್ಕ ಎಂಬಲ್ಲಿ ರಾಜ್ಯ ಹೆದ್ದಾರಿಯ ಬದಿಯ ಚರಂಡಿಯಲ್ಲಿ ಕೇಶವ ಎಂಬವರು ಕವಚಿ ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಇದು ಮಳೆ ಇಲ್ಲದ ಕಾರಣ ಮತ್ತು ಚರಂಡಿಯಲ್ಲಿ ಕಡಿಮೆ ನೀರು ಹರಿಯುತ್ತಿರುವ ಕಾರಣ ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಬಗ್ಗೆ ಸಂಶಯ ಇರುವುದರಿಂದ ತಹಶೀಲ್ದಾರ್ ಅವರು ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಜಿಲ್ಲಾಧಿಕಾರಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 26 ವಿದ್ಯುತ್ ಕಂಬಗಳಿಗೆ ಹಾಗೂ 1.14 ಕಿ.ಮೀ. ವಿದ್ಯುತ್ ತಂತಿಗೆ ಹಾನಿಯಾಗಿದೆ. ಉಳ್ಳಾಲದಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ. ಮೂಡುಬಿದಿರೆಯಲ್ಲಿ ಅತ್ಯಧಿಕ ಮಳೆ: ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಮೂಡುಬಿದಿರೆಯಲ್ಲಿ ಅತ್ಯಧಿಕ 76.6 ಮಿ.ಮೀ., ಸುಳ್ಯ 70.9 ಮಿ.ಮೀ., ಬಂಟ್ವಾಳ 67.5 ಮಿ.ಮೀ., ಮಂಗಳೂರು 56.6 ಮಿ.ಮೀ., ಬೆಳ್ತಂಗಡಿ 48.7 ಮಿ.ಮೀ., ಕಡಬ 38.8 ಮಿ.ಮೀ ಮಳೆಯಾಗಿದೆ.