ಜಿಲ್ಲೆ

ದ.ಕ.ಲಾಕ್‌ಡೌನ್ ಸಿಎಂ ಜತೆ ಚರ್ಚಿಸಿ ತೀರ್ಮಾನ

Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ಸೋಮವಾರ ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಜತೆ, ತಾನು, ಸಂಸದರು, ಹಾಗೂ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಜಿಲ್ಲೆಯ ಕೋವಿಡ್ ಪರಿಸ್ಥಿತಿ ಅಧ್ಯಯನಕ್ಕೆ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಲಾಕ್‌ಡೌನ್ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಅಲ್ಲಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜನರಿಗೆ ತೊಂದರೆ ಆಗುವ ನಿರ್ಧಾರವನ್ನು ಹಠಾತ್ ಜಾರಿಗೆ ತರುವುದಿಲ್ಲ. ಜನರು ಗೊಂದಲಕ್ಕೀಡಾಗಬಾರದು ಎಂದೂ ತಿಳಿಸಿದ್ದಾರೆ.

ಸಂಡೇ ಲಾಕ್‌ಡೌನ್‌ಗೆ ಜನಸ್ಪಂದನೆ: ಸಂಡೇ ಲಾಕ್‌ಡೌನ್‌ಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಅವಶ್ಯ ಸೇವೆ ಹೊರತುಪಡಿಸಿ ಕರಾವಳಿ ಸಂಪೂರ್ಣ ಸ್ತಬ್ಧವಾಗಿತ್ತು.

ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಮೂಡುಬಿದಿರೆ, ಉಡುಪಿ, ಕುಂದಾಪುರ ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ದಿನಸಿ, ಮಾಂಸ ಮಾರಾಟದ ಅಂಗಡಿ, ಮಾರುಕಟ್ಟೆಗಳು ಬಂದ್ ಆಗಿದ್ದವು. ಮೆಡಿಕಲ್ ಸ್ಟೋರ್, ಆಸ್ಪತ್ರೆ, ಪೇಪರ್ ಸ್ಟಾಲ್, ಪೆಟ್ರೋಲ್ ಬಂಕ್ ಹಾಗೂ ಹಾಲಿನ ಬೂತ್‌ಗಳು ತೆರೆದಿದ್ದವು. ಕೆಲವೇ ವಾಹನಗಳು ರಸ್ತೆಗಿಳಿದಿದ್ದು, ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ತಪಾಸಣೆ ನಡೆಸಿ, ತುರ್ತು ಅವಶ್ಯ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.