ಮಂಗಳೂರು: ಗ್ರಾಮೀಣ ಭಾಗದ ಜನರು ಸೇರಿದಂತೆ ಪ್ರತಿಯೊಬ್ಬರೂ ಆನ್‌ಲೈನ್ ಆರ್ಥಿಕ ವ್ಯವಹಾರ ರೂಢಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ದಕ್ಷಿಣ ಕನ್ನಡ ಶೇ.100 ಆರ್ಥಿಕ ಸಾಕ್ಷರತೆ ಹೊಂದಿದ ಜಿಲ್ಲೆ. ಪೂರ್ಣ ಲಾಕ್‌ಡೌನ್‌ನಂತಹ ಸಂದರ್ಭ ಸಾರ್ವಜನಿಕರು ಬ್ಯಾಂಕ್‌ಗೆ ಭೇಟಿ ನೀಡದೆ ಪರ್ಯಾಯ ಮಾದರಿಗಳ ಮೂಲಕ ಆರ್ಥಿಕ ವ್ಯವಹಾರ ನಡೆಸುವಂತೆ ಜಿಲ್ಲಾ ಲೀಡ್‌ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ. ವಿಜಯವಾಣಿ ಮೂಲಕ ವಿನಂತಿಸಿದ್ದಾರೆ.
ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಭೀಮ್ ಆ್ಯಪ್, ಗೂಗಲ್ ಪೇ, ಇ-ಪಾಸ್ಬುಕ್ ಮುಂತಾದ ಪರ್ಯಾಯ ಮಾದರಿಗಳ ಮೂಲಕ ಆರ್ಥಿಕ ವ್ಯವಹಾರ ಮುಂದುವರಿಸುವಂತೆ ಸಲಹೆ ನೀಡಿದ್ದಾರೆ. ಬ್ಯಾಂಕುಗಳು ಎಲ್ಲ ಗ್ರಾಹಕರಿಗೂ ಎಟಿಎಂ ವಿತರಿಸಿದ್ದು, ಕೆಲವರು ಇದನ್ನು ಇನ್ನೂ ಉಪಯೋಗಿಸಲು ಆರಂಭಿಸಿಲ್ಲ. ಅವರು ಇವುಗಳನ್ನು ಬಳಸಲೇ ಬೇಕಾದ ಕಾಲ ಬಂದಿದೆ ಎಂದರು.
ಜಿಲ್ಲೆಯ ಎಲ್ಲ ಎಟಿಎಂಗಳಲ್ಲಿ ಹಣವಿದೆ. ಸರ್ಕಾರದ ಪ್ಯಾಕೇಜ್‌ಗಳ ಹಣ ಬರುವ ಸಂದರ್ಭ ಕೆಲವರಿಗೆ ಎಟಿಎಂ ಬಳಕೆ ಅಗತ್ಯ ಬೀಳಬಹುದು ಎಂದವರು ತಿಳಿಸಿದ್ದಾರೆ. ಪೂರ್ಣ ಲಾಕ್‌ಡೌನ್ ಹೊರತುಪಡಿಸಿದ ದಿನಗಳಲ್ಲಿ ಪ್ರಸ್ತುತ ಬ್ಯಾಂಕ್ ಶಾಖೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ ಎರಡು ಗಂಟೆ ತನಕ ತೆರೆದಿರುತ್ತದೆ. ಅನಿವಾರ್ಯ ಸಂದರ್ಭ ಮಾತ್ರ ಬ್ಯಾಂಕ್‌ಗಳಿಗೆ ತೆರಳುವಂತೆ ತಿಳಿಸಿದ್ದಾರೆ.
ಕೆಲ ಶಾಖೆಗಳು ಬಂದ್?: ಜಿಲ್ಲಾಡಳಿತ ಸೂಚಿಸಿದರೆ ಕೆಲ ಬ್ಯಾಂಕ್ ಶಾಖೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿ ಕೂಡ ಬರಬಹುದು. ಅಥವಾ ಕಾರ್ಯಾಚರಿಸುವ ಬ್ಯಾಂಕ್ ಶಾಖೆಗಳಿಗೆ ಜಿಲ್ಲಾಡಳಿತ ಮಿತಿ ನಿಗದಿಪಡಿಸಬಹುದು. ಉದಾಹರಣೆಗೆ ನಗರ ವ್ಯಾಪ್ತಿಯಲ್ಲಿ 3 ಕಿ.ಮೀಗೆ ಯಾವುದಾದರೂ ಒಂದು ಬ್ಯಾಂಕ್ ಶಾಖೆ ಮಾತ್ರ ಕಾರ್ಯನಿರ್ವಹಿಸಬೇಕು ಎನ್ನುವ ಸೂಚನೆ ಬರಬಹುದು. ಇಂತಹ ಪರಿಸ್ಥಿತಿ ಎದುರಿಸಲು ಕೂಡ ಸಿದ್ಧರಾಗುವಂತೆ ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ. ಸಾರಿಗೆ ವ್ಯವಸ್ಥೆ ನಿರ್ಬಂಧಿಸಿರುವ ಕಾರಣ ಸಿಬ್ಬಂದಿ ಬ್ಯಾಂಕ್‌ಗಳಿಗೆ ತೆರಳುವುದು ಕಷ್ಟವಾಗಿದೆ. ಜನರ ಓಡಾಟ ಕಡಿಮೆ ಮಾಡುವ ದೃಷ್ಟಿಯಿಂದ ಕೂಡ ಬ್ಯಾಂಕ್‌ಗಳಲ್ಲಿ ಗ್ರಾಹಕರ ನೇರ ವ್ಯವಹಾರಗಳನ್ನು ಸೀಮಿತಗೊಳಿಸುವುದು ಅವಶ್ಯ ಎಂದು ಪ್ರವೀಣ್ ಎಂ.ಪಿ. ತಿಳಿಸಿದ್ದಾರೆ.