ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ ಶುಕ್ರವಾರ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರ ಹಾಗೂ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಠಾಣೆಗಳಿಗೆ ನಿಯೋಜಿಸುವ ಗೃಹರಕ್ಷಕರ ಪಟ್ಟಿಯನ್ನು ನೀಡುವಂತೆ, ಕವಾಯತು ಹಾಜರಾತಿ ಪಟ್ಟಿಯನ್ನು 5ನೇ ತಾರೀಖಿನೊಳಗೆ ನೀಡುವಂತೆ, ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು.


ಗೃಹರಕ್ಷಕರ ಕ್ಷೇಮಾಭಿವೃದ್ದಿ ನಿಧಿಗೆ ವಂತಿಗೆಯನ್ನು ಕಟ್ಟಲು ಬಾಕಿ ಇರುವ ಗೃಹರಕ್ಷಕರ ಬಗ್ಗೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಚರ್ಚಿಸಲಾಯಿತು. ಮೂರು ವರ್ಷಗಳನ್ನು ಮೀರಿದ ಗೃಹರಕ್ಷಕರು ನವೀಕರಣ ಮಾಡಿಸಲು ಸೂಚಿಸಲಾಯಿತು. ಹೊಸ ಗೃಹರಕ್ಷಕರನ್ನು ಸಂಸ್ಥೆಗೆ ಸೇರ್ಪಡೆಗೊಳಿಸುವ ಕುರಿತು, ಸಮವಸ್ತ್ರಗಳನ್ನು ಪಡೆಯಲು ಬಾಕಿ ಇರುವ ಗೃಹರಕ್ಷಕರು ಪಡೆದುಕೊಳ್ಳುವ ಬಗ್ಗೆ ಮತ್ತು ಬೆಂಗಳೂರು ಮತ್ತು ದಾವಣಗೆರೆಯ ತರಬೇತಿ ಅಕಾಡೆಮಿಯಲ್ಲಿ ನಡೆಯುವ ತರೇತಿಗಳಿಗೆ ಎಲ್ಲಾ ಘಟಕಗಳಿಂದ ಗೃಹರಕ್ಷಕರನ್ನು ನಿಯೋಜಿಸುವಂತೆ ಸೂಚಿಸಲಾಯಿತು. ಗೃಹರಕ್ಷಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.


ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ಸ್ವಾಗತಿಸಿದರು. ಜಿಲ್ಲೆಯ 15 ಘಟಕಗಳ ಘಟಕಾಧಿಕಾರಿಗಳಾದ ಐತಪ್ಪ, ಅಭಿಮನ್ಯು ರೈ, ತೀರ್ಥೇಶ್, ಸುನಿಲ್, ದಿನೇಶ್ ಬಿ., ರಮೇಶ್, ಹರಿಶ್ಚಂದ್ರ, ಜಯಾನಂದ, ಶಿವಪ್ಪ ನಾಯ್ಕ, ಸಂಜೀವ, ಸುನಿಲ್ ಕುಮಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.