ಜಿಲ್ಲೆ

ಸೆ.16ರಂದು ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ದ.ಕ.ಜಿಲ್ಲಾಮಟ್ಟದ ಶೈಕ್ಷಣಿಕ ಸಮಾವೇಶ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮತ್ತು ಉಜಿರೆಯ ಶ್ರೀ ಧ.ಮಂ.ಪದವಿಪೂರ್ವ ಕಾಲೇಜು ಜಂಟಿ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ 2022-23 ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ಸೆ. 16ರಂದು ಬೆಳಗ್ಗೆ 9.45ಕ್ಕೆ ನಡೆಯಲಿದೆ.

ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಇಲಾಖಾ ಸಚಿವ ಬಿ.ಸಿ.ನಾಗೇಶ್ ಸೇವಾ ನಿವೃತ್ತ ಪ್ರಾಚಾರ್ಯರನ್ನು ಸನ್ಮಾನಿಸಲಿರುವರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಡಿ .ಜಯಣ್ಣ ಮತ್ತು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಭಾಗವಹಿಸಲಿದ್ದಾರೆ.

ಸಮಾವೇಶದಲ್ಲಿ ನವವಿನ್ಯಾಸದ ಸುವಿದ್ಯಾ ತಂತ್ರಾಂಶ ಬಿಡುಗಡೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಗೌರವಿಸುವುದು. ಯೂಟ್ಯೂಬ್ ತರಗತಿ ನಡೆಸಿದ ಪ್ರಾಚಾರ್ಯರು, ಉಪನ್ಯಾಸಕರಿಗೆ ಸನ್ಮಾನ, ಕೋವಿಡ್‌ಗೆ ತುತ್ತಾಗಿ ಸಾವನ್ನಪ್ಪಿದ ಯೂಟ್ಯೂಬ್ ತರಗತಿಯ ಉಪನ್ಯಾಸಕರ ಕುಟುಂಬಕ್ಕೆ ಸಹಾಯಧನ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.