ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲಾ ತಂಡ ಚಾಂಪಿಯನ್

ಮೈಸೂರು: ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ತಂಡವು ಪ್ರಾಥಮಿಕ ಮತ್ತು ಪ್ರೌಢಶಾಲಾ(14 ಹಾಗೂ 17 ವರ್ಷ ವಯೋಮಿತಿ) ಎರಡೂ ವಿಭಾಗದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ‘ತಂಡ ಸಮಗ್ರ’ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಜರ್‌ಬಾದ್‌ನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಕ್ರೀಡಾಕೂಟದ 14 ವರ್ಷ ವಯೋಮಿತಿಯ ಶಾಲಾ ಮಕ್ಕಳ ವಿಭಾಗದಲ್ಲಿ ಒಟ್ಟು 60 ಅಂಕ ಹಾಗೂ 17 ವರ್ಷ ವಯೋಮಿತಿಯ ಶಾಲಾ ಮಕ್ಕಳ ವಿಭಾಗದಲ್ಲಿ ಒಟ್ಟು 63 ಅಂಕ ಪಡೆಯುವ ಮೂಲಕ ದಕ್ಷಿಣ ಕನ್ನಡ ಈ ಸಾಧನೆ ಮಾಡಿತು.


ಅಂತೆಯೇ, 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂತ ಅಲೋಶಿಯಸ್ ಶಾಲೆಯ ಹಸ್ಮಿತ್ ಎ.ಸಾಲಿಯಾನ ಒಟ್ಟು 10 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದರು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರದ ಸರ್ಕಾರಿ ಕ್ರೀಡಾ ಶಾಲೆಯ ಪ್ರಣತಿ ಹಾಗೂ ಧಾರವಾಡದ ಆರ್‌ಎನ್‌ಎಸ್ ಸರ್ಕಾರಿ ಪ್ರೌಢ ಶಾಲೆಯ ಶಿಲ್ಪಾ ಹೊಸಮನಿ ತಲಾ 10 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಹಂಚಿಕೊಂಡರು.

14 ವರ್ಷ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕೋಲಾರ ಜಿಲ್ಲೆ ಬಂಗಾರಪೇಟೆ ಕಳವಂಚಿಯ ಸರ್ಕಾರಿ ಹಿರಿಯರ ಪ್ರಾಥಮಿಕ ಶಾಲೆಯ ಅಣ್ಣೆಪ್ಪ 11 ಅಂಕಗಳೊಂದಿಗೆ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರದ ನಿರ್ಮಲರಾಣಿ ಶಾಲೆಯ ಚೇತನಾ ಭಾಸ್ಕರ್ 15 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದರು.
ಡಿಡಿಪಿಐ ರಾಮಚಂದ್ರರಾಜೇ ಅರಸ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿದ್ದರಾಜು ಹಾಗೂ ಇತರೆ ಅಧಿಕಾರಿಗಳು ಬಹುಮಾನ ವಿತರಿಸಿದರು.