ಜಿಲ್ಲೆ

ಅರೆಭಾಷೆ ಸಂಸ್ಕೃತಿ, ಸಾಹಿತ್ಯಕ್ಕೆ ಪ್ರೋತ್ಸಾಹ : ಸುಬ್ರಹ್ಮಣ್ಯದಲ್ಲಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಭಿಮತ

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ವಾರ್ತೆ ಹಾಗೂ ಸಂಸ್ಕೃತಿಯನ್ನು ಉಣ ಬಡಿಸಿದಾಗ ಅದು ಮುಂದಿನ ತಲೆಮಾರಿನವರೆಗೂ ನಿರಂತರವಾಗಿ ಸಾಗಲು ಪ್ರೇರೇಪಣೆಯಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಂದಲೇ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗಲಿ ಎನ್ನುವ ಉದ್ದೇಶದಿಂದ ಎರಡು ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘಗಳ ಸಮ್ಮಿಲನ ಹಾಗೂ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನಕಲ್ ಉದ್ಘಾಟಿಸಿದರು. ಎಸ್.ಎಸ್.ಪಿ.ಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್, ಸುಬ್ರಹ್ಮಣ್ಯ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಡಾ.ಎ.ಎ.ತಿಲಕ್, ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕಾರ್ಯಪ್ಪ ಪಿ.ಎಸ್., ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಲತಾ ಪ್ರಸಾದ್ ಕುತ್ಪಾಜೆ ಹಾಗೂ ಚಂದ್ರಾವತಿ ಬಡ್ಡೆಡ್ಕ ಮೊದಲಾದವರಿದ್ದರು. ಚಂದ್ರಶೇಖರ ಪೆರಾಲು ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸೌಮ್ಯಾ ದಿನೇಶ್ ನಿರೂಪಿಸಿದರು. ಲೋಕೇಶ್ ಊರುಬೈಲು ವಂದಿಸಿದರು.