ಜಿಲ್ಲೆ

ಕತ್ತಲಲ್ಲಿದ್ದ ಸಮಾಜಕ್ಕೆ ನಾರಾಯಣಗುರುಗಳಿಂದ ಬೆಳಕು; ಜನ್ಮ ದಿನಾಚರಣೆ ಉದ್ಘಾಟಿಸಿ ಸಂಸದ ನಳಿನ್‌

reportermng

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಅಸ್ಪೃಶ್ಯತೆಯಿಂದ ನಲುಗಿ ಕತ್ತಲಲ್ಲಿದ್ದ ಸಮಾಜಕ್ಕೆ ಬೆಳಕು ನೀಡಿದೆ. ವಿವಿಧ ರಾಷ್ಟ್ರಗಳಲ್ಲಿನ ಇಂದಿನ ವಿದ್ಯಮಾನಗಳನ್ನು ನೋಡಿದಾಗ ಅವರ ಸಂದೇಶ, ಉತ್ತಮ ವಿಚಾರಧಾರೆಗಳು ವಿಶ್ವಮಾನ್ಯವಾದುದೆಂದು ತಿಳಿಯುತ್ತದೆ ಎಂದು ಸಂಸದ ನಳಿನ್ ಕಟೀಲ್‌ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಾಂತಿಕಾರಿ ಪುರುಷರಾಗಿರುವ ನಾರಾಯಣ ಗುರುಗಳು ಸಾಮಾನ್ಯ ಜನರೂ ದೇವರನ್ನು ಪೂಜಿಸಲು ಅವಕಾಶ ಕಲ್ಪಿಸಿದವರು. ಶಿಕ್ಷಣವೇ ಕಷ್ಟ ಎನ್ನುವ ಆ ಕಾಲಘಟ್ಟದಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಪದ್ಧತಿ ಜಾರಿಗೆ ತಂದರು. ಆ ಮೂಲಕ ಶಿಕ್ಷಣದಿಂದ ಮುಂದೆ ಬನ್ನಿ ಎಂದು ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಮಂಗಳೂರಿಗೂ ಗುರುಗಳಿಗೂ ಅವಿನಾಭಾವ ಸಂಬಂಧವಿದೆ. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅವರು ಹೊರರಾಜ್ಯದಲ್ಲಿ ಅವರು ಸ್ಥಾಪಿಸಿದ ಮೊದಲ ದೇವಸ್ಥಾನ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್, ಮಹಿಳೆಯರಿಗೂ ಶಿಕ್ಷಣ ಸಿಗಬೇಕು ಎಂದು ಗುರುಗಳು ಶಿಕ್ಷಣಕ್ಕೆ ವಿಶೇಷ ಅವಕಾಶ ಕಲ್ಪಿಸಿದರು. ಕರಾವಳಿಯುದ್ದಕ್ಕೂ ಅವರ ಚಿಂತನೆಗಳು ಜನಜನಿತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ನಾರಾಯಣ ಗುರುಗಳ ವಿಚಾರಧಾರೆಯಿಂದ ಸಮಾಜ ಹೇಗೆ ಬದಲಾಗಿದೆ ಎಂದು ವೈಯಕ್ತಿಕವಾಗಿ ಕಂಡಿದ್ದೇನೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.