ಮಂಗಳೂರು: ಮಹಾತ್ಮ ಗಾಂಧೀಜಿ ಅವರ ಜನ್ಮ ದಿನದ ಸ್ಮರಣಾರ್ಥ ಆ.2ರಂದು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮರ ಧ್ಯೇಯ ವಾಕ್ಯ ಸ್ವ್ವಚ್ಛತೆಯೇ ದೈವತ್ವ ಎಂಬ ಕನಸನ್ನು ನನಸಾಗಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯೇ ಸೇವೆ ವಿಶೇಷ ಆಂದೋಲನ ಸೆ.15ರಿಂದ ಅ.2ರ ತನಕ ಆಯೋಜಿಸಲಾಗಿದೆ.
ತ್ಯಾಜ್ಯ ಮುಕ್ತ ಭಾರತ ನಿರ್ಮಾಣ ಉದ್ದೇಶದಿಂದ ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ, ಸದೃಢ ಗ್ರಾಮಗಳನ್ನು ರೂಪಿಸಲು ಈ ಆಂದೋಲನದ ಅವಧಿಯಲ್ಲಿ ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ದಟ್ಟಣೆ ಇರುವ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಸಮುದ್ರ ತೀರ ಪ್ರದೇಶ, ನದಿ ತೀರ, ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮತ್ತು ದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮದಾನ ಮತ್ತು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
ಏನೇನು ಮಾಡಲಾಗುತ್ತಿದೆ?
15 ದಿನಗಳ ಕಾಲ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಅವಧಿಯಲ್ಲಿ ಕಸ ಬೀಳುವ ಪ್ರದೇಶಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಜನ ಪ್ರತಿನಿಧಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಪಂಚಾಯಿತಿ,ಶಾಲೆ,ಕಾಲೇಜು ಹಾಗೂ ಇತರೆ ಸಾರ್ವಜನಿಕ ಪ್ರದೇಶ ಯುವಕ ಸಂಘಗಳು, ಸ್ವ ಸಹಾಯ ಗುಂಪುಗಳ ಸಹಾಯದಿಂದ ಅರಿವು ಮೂಡಿಸಿ,ಕಸ ವಿಲೇವಾರಿ ನಡೆಸಲಾಗುತ್ತದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆ, ಅಂಗನವಾಡಿ, ಆಸ್ಪತ್ರೆ, ಅಂಗಡಿ ಮುಂಗಟ್ಟು ಪ್ರದೇಶಗಳು ಸರ್ಕಾರಿ ಮತ್ತು ಸಮುದಾಯಧಾರಿತ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸ್ವಸಹಾಯ ಗುಂಪಿನ ಮಹಿಳೆಯರು ಹಾಗೂ ಗ್ರಾಮದ ಮುಖಂಡರೊಂದಿಗೆ ಶ್ರಮದಾನ ಚಟುವಟಿಕೆ ನಿರ್ವಹಿಸುವುದು. ಅಂಗನವಾಡಿ, ಆಸ್ಪತ್ರೆ, ಅಂಗಡಿ ಮುಂಗಟ್ಟು ಪ್ರದೇಶಗಳು ಸರ್ಕಾರಿ ಮತ್ತು ಸಮುದಾಯಧಾರಿತ ಕಟ್ಟಡಗಳಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಉಗುಳುವುದು ಕಡಿಮೆ ಮಾಡಲು ಸ್ವಚ್ಛತಾ ಪ್ರತಿಜ್ಞೆ ಭೋಧಿಸಲು ಕ್ರಮ ವಹಿಸುವುದು. ಪ್ಲಾಸ್ಟಿಕ್ ವಸ್ತುಗಳ ಬದಲಾಗಿ ಬ ್ಟೆಚೀಲಗಳನ್ನು ಬಳಸಲು ಪ್ರೇರೇಪಿಸುವ ವಿಶೇಷ ಅಭಿಯಾನ ಆಯೋಜಿಸುವುದು.
ಗ್ರಾಮದಲ್ಲಿರುವ ಎಲ್ಲಾ ಚರಂಡಿ ಸ್ವಚ್ಛತೆಗೆ ಕ್ರಮವಹಿಸುವುದು. ಸೊಳ್ಳೆ ಕೀಟಗಳು ಹೆಚ್ಚಾಗದಂತೆ ಜಾಗೃತಿ ನಡೆಸುವುದು. ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ, ತ್ಯಾಜ್ಯದ ಸಾಗಣೆ ವಿಲೇವಾರಿ, ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿಸುವ ಪ್ರಾಮುಖ್ಯತೆ ಅರ್ಥಮಾಡಿಸುವುದು. ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ನೈರ್ಮಲ್ಯ ಕುರಿತ ಗುಂಪುಗಳನ್ನು ರಚಿಸುವುದು.
ಗ್ರಾಮೀಣ ಭಾಗದ ರಸ್ತೆಗಳಲ್ಲಿ ನಾಮಫಲಕ ಅಳವಡಿಸುವುದು. ಸ್ವಚ್ಛ ಸಂಕೀರ್ಣ, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಸುಂದರ, ಜಲ ಸಂರಕ್ಷಣಾ ಗ್ರಾಮ ಎಂಬಿತ್ಯಾದಿ ಹೆಸರನ್ನಿಡಲು ಕ್ರಮ ವಹಿಸುವುದು. ಮನೆಗಳಲ್ಲಿ ಹೆಚ್ಚು ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಣೆ ಮಾಡುವವರಿಗೆ ವಿಶೇಷ ಪ್ರೋತ್ಸಾಹ ನೀಡಲು ಕ್ರಮ ವಹಿಸುವುದು. ಸ್ವಚ್ಛತಾ ರಸ ಪ್ರಶ್ನೆಗಳು, ಗಿಡ ನೆಡುವುದು, ಸ್ವಚ್ಛತಾ ಪ್ರತಿಜ್ಞೆ, ಸ್ವಚ್ಛತಾ ಓಟ ಆಯೋಜಿಸುವುದು. ಸಮುದ್ರ ತೀರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛಗೊಳಿಸಲು ವಿಶೇಷ ಪ್ಲೋಗಿಂಗ್ ಡ್ರೈವ್ಸ್, ಮಾರಥಾನ್ ಹಮ್ಮಿಕೊಳ್ಳುವುದು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಕುವುದು, ಉಗುಳುವುದು, ಪ್ಲಾಸ್ಟಿಕ್ ಬಳಕೆ ಮಾಡುವುದು, ಕಸ ಸುಡುವುದು ಮುಂತಾದುವುಗಳ ಮಾಹಿತಿಯನ್ನು ಗೋಡೆಬರಹ ಬರೆಸಲು ಕ್ರಮ ವಹಿಸುವುದು. ತ್ಯಾಜ್ಯ ಬಿಸಾಡುವುದರಿಂದ ಆಗುವ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಶೇ.100 ರಷ್ಟು ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಮಾಡಲು ಜನ ಜಾಗೃತಿ ಮೂಡಿಸುವುದು. ಗ್ರಾಮ ಹಂತದಲ್ಲಿ ಅಂಗಡಿ, ಹೋಟೆಲ್‌ಗಳು, ಸಂತೆ ನಡೆಯುವ ಸ್ಥಳ, ರೇಷನ್ ಅಂಗಡಿಗಳು, ಬಸ್ ನಿಲ್ದಾಣಗಳಲ್ಲಿ ತ್ಯಾಜ್ಯ ಉತ್ಪತ್ತಿಯಾಗುವ ಪ್ರದೇಶ ಗುರುತಿಸಿ ಜಾಗೃತಿ ಮೂಡಿಸುವುದು. ಸ್ವಚ್ಛತಾ ವಾಹಿನಿಗೆ ನೀಡುವಂತೆ ಪ್ರೇರೇಪಣೆ ನೀಡುವುದು. ಕರಪತ್ರಗಳನ್ನು ಹಂಚುವುದು.
ಪರಿಸರ ಸ್ನೇಹಿ ಕೈ ಚೀಲ, ಬಟ್ಟೆ ಬ್ಯಾಗ್‌ಗಳನ್ನು ಬಳಸುವಂತೆ ಜನರಲ್ಲಿ ತಿಳುವಳಿಕೆ ನೀಡುವುದು. ಶಾಲಾ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸುವುದು. ಶಾಲಾ ಮಕ್ಕಳ ಜಾಥ ಸೇರಿದಂತೆ ಶುಚಿತ್ವ ಕುರಿತು ಜಾಗೃತಿ ಮೂಡಿಸುವುದು ಈ ಆಂದೋಲನದ ಪ್ರಮುಖ ಧ್ಯೇಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಸ್ವಚ್ಛತೆಯೇ ಸೇವೆ ಆಂದೋಲನ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.
ಡಾ.ಆನಂದ್ ಕೆ.
ಸಿಇಒ, ಜಿ.ಪಂ. ದಕ್ಷಿಣ ಕನ್ನಡ