ಮಂಗಳೂರು/ಉಡುಪಿ: ಕರಾವಳಿಯಲ್ಲಿ ಬುಧವಾರ 20 ಜನರು ಕೋವಿಡ್ ಸೋಂಕಿಗೆ ಒಳಗಾದರು. ಮಂಗಳವಾರ ಶೂನ್ಯ ಕರೊನಾ ಪ್ರಕರಣ ದಾಖಲಿಸಿದ್ದ ದ.ಕ.ಜಿಲ್ಲೆಯಲ್ಲಿ ಬುಧವಾರ 11 ಪ್ರಕರಣಗಳು ಕಂಡುಬಂದರೆ, ಉಡುಪಿ ಜಿಲ್ಲೆಯಲ್ಲಿ 9 ಮಂದಿ ಸೋಂಕಿತರಾದರು.
ದ.ಕ.ಜಿಲ್ಲೆಯ 11 ಕರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಮೂರು ಕುಟುಂಬದ 9 ಮಂದಿ ಸೇರಿದ್ದಾರೆ. ಮೇ 15ರಂದು ಮುಂಬೈನಿಂದ ಮಂಗಳೂರಿನ ಬಜ್ಪೆಯಲ್ಲಿರುವ ತಮ್ಮ ಮನೆಗೆ ಬಂದಿದ್ದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. 46 ವರ್ಷದ ಗಂಡಸು, 59 ವರ್ಷದ ಅವರ ಅಕ್ಕ, 11 ಹಾಗೂ 3 ವರ್ಷದ ಮಕ್ಕಳಿಗೆ ಕರೊನಾ ಬಂದಿದೆ.
ಇನ್ನೊಂದು ಕುಟುಂಬದವರು ಪುತ್ತೂರಿನವರಾಗಿದ್ದು 37 ವರ್ಷದ ಮಹಿಳೆ, 39 ವರ್ಷದ ಗಂಡಸು ಹಾಗೂ 17ರ ಬಾಲಕಿಗೂ ದೃಢಪಟ್ಟಿದೆ. ಇವರು ದುಬೈನಿಂದ ಮೇ.16ರಂದು ಬಂದು ಪುತ್ತೂರಿನ ಕ್ವಾರಂಟೈನ್ ಸೆಂಟರ್‌ನಲ್ಲಿದ್ದರು.
ಅಲ್ಲದೆ ಮುಂಬೈನಿಂದ ಆಗಮಿಸಿದ 35 ವರ್ಷದ ಗಂಡಸು, ಅವರ ಕುಟುಂಬದ 36 ವರ್ಷದ ಮಹಿಳೆ ಉಳ್ಳಾಲದವರಾಗಿದ್ದು ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಮೇ.17ರಂದು ಮುಂಬೈನಿಂದ ಆಗಮಿಸಿ ಬೆಳ್ತಂಗಡಿಯಲ್ಲಿದ್ದ 45 ವರ್ಷದ ಮಹಿಳೆ ಮತ್ತು ಮೇ.15ರಂದು ಗುಜರಾತ್‌ನಿಂದ ಬಂದಿದ್ದ 22 ವರ್ಷದ ಗಂಡಸಿಗೂ ಕರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿದೆ.
ಬಜ್ಪೆಯ ಕೆಂಜಾರು ಗ್ರಾಮದಲ್ಲಿರುವ ಮನೆಯಲ್ಲಿ ಕರೊನಾ ದೃಢಪಟ್ಟ ಒಂದೇ ಕುಟುಂಬದ ನಾಲ್ವರು ಕ್ವಾರಂಟೈನ್‌ನಲ್ಲಿದ್ದರು. ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿರಲಿಲ್ಲ. ಮನೆಯಲ್ಲಿದ್ದವರು ಕೆಲವೆಡೆಗೆ ಹೋಗಿರುವುದಾಗಿ ಹೇಳಲಾಗುತ್ತಿದೆಯಾದರೂ ಅಧಿಕಾರಿಗಳು ದೃಢಪಡಿಸಿಲ್ಲ. ಸದ್ಯ ಹಲವು ಮನೆಗಳಲ್ಲಿ ಇದೇ ರೀತಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸರ್ಕಾರದ ನೂತನ ಮಾರ್ಗಸೂಚಿ ಪ್ರಕಾರ ಹೊರರಾಜ್ಯದಿಂದ ಬರುವವರಲ್ಲಿ ಕೋವಿಡ್ ಲಕ್ಷಣಗಳಿಲ್ಲದಿದ್ದರೆ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಬಹುದು. ಸಾಮಾನ್ಯವಾಗಿ ಅವರು ಹೊರಗೆ ತಿರುಗಾಡಿದರೆ ಪಕ್ಕದ ಮನೆಯವರು ಮಾಹಿತಿ ನೀಡುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮನೆಯವರು ಮನೆಯಲ್ಲೇ ಇದ್ದ ಕಾರಣ ಮನೆಯನ್ನು ಮಾತ್ರವೇ ಸೀಲ್‌ಡೌನ್ ಮಾಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
163 ಮಂದಿ ಸ್ಕ್ರೀನಿಂಗ್
ಬುಧವಾರ 163 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಎನ್‌ಐಟಿಕೆ ಸುರತ್ಕಲ್ ಮತ್ತು ಇಎಸ್‌ಐನಲ್ಲಿ ತಲಾ 47 ಹಾಗೂ 27 ಮಂದಿಯನ್ನು ನಿಗಾವಣೆಯಲ್ಲಿರಿಸಲಾಗಿದೆ. 517 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು ಬಂದಿರುವ 321ರಲ್ಲಿ 11 ಪಾಸಿಟಿವ್ ಆಗಿದೆ. ಇನ್ನೂ 1267 ಸ್ಯಾಂಪಲ್‌ಗಳ ವರದಿ ಬರಲು ಬಾಕಿ ಇದೆ. 20 ಮಂದಿಯ ಸ್ಥಿತಿ ಮೇಲೆ ನಿಗಾ ಇರಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಉಸಿರಾಟದ ತೊಂದರೆ ಇರುವ 14 ಪ್ರಕರಣಗಳು ವರದಿಯಾಗಿರುತ್ತವೆ.
ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್
ಮೇ 12ರಂದು ಕೋವಿಡ್ ಪಾಸಿಟಿವ್ ಆಗಿ ವೆನ್ಲಾಕ್‌ಗೆ ದಾಖಲಾಗಿದ್ದ ಕಾರ್ಕಳ ಸಾಣೂರಿನ 50 ವರ್ಷದ ಮಹಿಳೆ ಹಾಗೂ ಅವರ 26 ವರ್ಷದ ಪುತ್ರ ಮತ್ತು ಮೇ 13ರಂದು ಕೋವಿಡ್ ಪಾಸಿಟಿವ್ ಆಗಿದ್ದ ಸೋಮೇಶ್ವರ ನಿವಾಸಿ 38ರ ಮಹಿಳೆ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ 45 ಕೋವಿಡ್ ರೋಗಿಗಳು ದಾಖಲಾಗಿದ್ದು, 42 ಮಂದಿಯ ಸ್ಥಿತಿ ತೃಪ್ತಿಕರವಾಗಿದೆ. ದುಬೈನಿಂದ ಮರಳಿದ್ದ 76 ವರ್ಷದ ಗಂಡಸು ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 68ವರ್ಷದ ಸುರತ್ಕಲ್ ಗುಡ್ಡಕೊಪ್ಲದ ಮಹಿಳೆ ಮಧುಮೇಹ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂವರ ವಿರುದ್ಧ ಪ್ರಕರಣ
ಮಂಗಳೂರಿನಲ್ಲಿ ಗೃಹ ನಿಗಾವಣೆಯಲ್ಲಿದ್ದ ಮೂವರು ಕ್ವಾರಂಟೈನ್ ನಿಬಂಧನೆ ಉಲ್ಲಂಘಿಸಿ ಹೊರಬಂದು ಓಡಾಡಿರುವುದು ಪತ್ತೆಯಾಗಿದ್ದು, ಅವರ ಮೇಲೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊರರಾಜ್ಯಗಳಿಂದ ಬರುವವರನ್ನು ಗೃಹ ಕ್ವಾರಂಟೈನ್ ಮಾಡುವಾಗ ಅವರ ಲೊಕೇಶನ್ ಗುರುತು ಮಾಡಿಕೊಳ್ಳಲಾಗುತ್ತಿದ್ದು, ಅವರು ಅದರ 100 ಮೀಟರ್ ವ್ಯಾಪ್ತಿ ಮೀರಿ ಹೊರಗೆ ಬಂದರೆ ಕಂಟ್ರೋಲ್ ರೂಮ್‌ಗೆ ಗೊತ್ತಾಗುತ್ತದೆ. ಈ ಕೋವಿಡ್ ಕ್ವಾರಂಟೈನ್ ಅಲರ್ಟ್ ಸಿಸ್ಟಂನಿಂದಾಗಿಯೇ ಮೂವರ ಓಡಾಟ ಪತ್ತೆಯಾಗಿತ್ತು.
ಉಡುಪಿ ಬಿಡಲೊಲ್ಲದ ಮಹಾ ನಂಟು
ಉಡುಪಿ: ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬುಧವಾರ 9 ವರ್ಷದ ಬಾಲಕನೂ ಸಹಿತ ಸೋಂಕಿಗೊಳಗಾದವರು 9 ಮಂದಿ. ವಿವಿಧ ತಾಲೂಕು ಕೇಂದ್ರಗಳಲ್ಲಿ ಕ್ವಾರೈಂಟೆನ್‌ಗೆ ಒಳಗಾಗಿದ್ದವರನ್ನು ಕೋವಿಡ್ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. 103 ಮಂದಿಯ ವರದಿ ನೆಗೆಟಿವ್ ಬಂದಿದೆ. 7016 ವರದಿ ಬರಲು ಬಾಕಿ ಇದೆ. ಮಹಾರಾಷ್ಟ್ರದಿಂದ ಹಿಂದಿರುಗಿದ್ದ 41 ವರ್ಷದ ಪುರುಷ, 31 ವರ್ಷದ ಮಹಿಳೆ, 27 ವರ್ಷದ ಯುವಕ, 30 ವರ್ಷದ ಯುವಕ , 32 ವರ್ಷದ ಯುವಕ, 17 ವರ್ಷದ ಯುವತಿ, 34 ವರ್ಷದ ಯುವಕ, 25 ವರ್ಷದ ಯುವಕ, 9 ವರ್ಷದ ಬಾಲಕನಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಬುಧವಾರ 1158 ಮಾದರಿ ಸಂಗ್ರಹಿಸಲಾಗಿದ್ದು, 16 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. 25 ಮಂದಿ ಬಿಡುಗಡೆಯಾಗಿದ್ದಾರೆ. 42 ಮಂದಿ 24 ದಿನದ ಹಾಗೂ 118 ಮಂದಿ 14 ದಿನದ ನಿಗಾ ಅವಧಿ ಪೂರೈಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 120 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 116 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಕಾಸರಗೋಡಿನಲ್ಲಿ ಹತ್ತು ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಹತ್ತು ಮಂದಿಯಲ್ಲಿ ಕೋವಿಡ್-19 ಪತ್ತೆಯಾಗಿದೆ. ಇವರಲ್ಲಿ ಮುಂಬೈನಿಂದ ಆಗಮಿಸಿದವರು 8 ಮಂದಿ ಇದ್ದಾರೆ. ವಿದೇಶದಿಂದ ಬಂದವರು ಒಬ್ಬ ಮಹಿಳೆ ಸಹಿತ ಇಬ್ಬರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.