ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಕರೊನಾ ಪಾಸಿಟಿವ್

Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಎರಡು ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 54ಕ್ಕೇರಿದೆ.

ಮುಂಬೈನಿಂದ ಮಂಗಳೂರಿಗೆ ಮೇ 14ರಂದು ಆಗಮಿಸಿದ ಬಂಟ್ವಾಳ ತಾಲೂಕಿನ ಕರೋಪಾಡಿಯ 30 ವರ್ಷದ ಯುವಕನನ್ನು ವೈದ್ಯಕೀಯ ನಿಗಾವಣೆಯಲ್ಲಿಟ್ಟಿದ್ದು, ಅವರ ಸ್ಯಾಂಪಲ್ ಪರೀಕ್ಷೆಯಲ್ಲೂ ಕೋವಿಡ್ ದೃಢವಾಗಿದೆ.

55 ವರ್ಷದ ಮಹಿಳೆ ಉಸಿರಾಟದ ತೊಂದರೆಯೊಂದಿಗೆ ಮೇ 16ರಂದು ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದ್ದು, ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಅವರು ಯೆಯ್ಯಡಿ ನಿವಾಸಿಯಾಗಿದ್ದು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಅವರು ತಮ್ಮ ಸೋದರ ಹಾಗೂ ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದು ಮನೆಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಜ್ವರದಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆಯೂ ಇತ್ತು.

ಕಂಟೇನ್ಮೆಂಟ್ ಇಂದು ಅಂತಿಮ: ಯೆಯ್ಯಡಿಯಲ್ಲಿ ಯಾವ ಪ್ರದೇಶದಲ್ಲಿ ಮಹಿಳೆ ವಾಸಿಸುತ್ತಿದ್ದರು, ಅವರ ಸಂಪರ್ಕದ ವಿವರ ಇತ್ಯಾದಿಗಳನ್ನು ಪತ್ತೆ ಮಾಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಆ ಕೆಲಸ ಮಾಡುತ್ತಿದ್ದಾರೆ. ಈ ವರೆಗೆ ಹೆಚ್ಚಿನ ವಿವರ ತಿಳಿದಿಲ್ಲ, ಅದನ್ನು ತಿಳಿದುಕೊಂಡು ಮೇ.19ರಂದು ಬೆಳಗ್ಗೆ ಕಂಟೈನ್‌ಮೆಂಟ್ ವಲಯ ನಿಗದಿಪಡಿಸಿ ಸೀಲ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮತ್ತೊಂದು ಕಂಟೇನ್ಮೆಂಟ್ ರದ್ದು: ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದಲ್ಲಿ ಇಬ್ಬರು ಕೋವಿಡ್ ರೋಗಿಗಳೂ ಗುಣಮುಖರಾಗಿದ್ದು, ಹೊಸ ಪ್ರಕರಣ ವರದಿಯಾಗದಿರುವ ಹಿನ್ನೆಲೆಯಲ್ಲಿ ವಲಯವನ್ನು ರದ್ದುಗೊಳಿಸಿ, ನಿರ್ಬಂಧ ತೆರವು ಮಾಡಲಾಗಿದೆ.

32 ರೋಗಿಗಳು: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 32 ರೋಗಿಗಳು ದಾಖಲಾಗಿದ್ದು 30 ಮಂದಿಯ ಸ್ಥಿತಿ ತೃಪ್ತಿಕರವಾಗಿದೆ. ಪಿ-1008 76 ವರ್ಷದ ಗಂಡಸು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಪಿ-1009 68 ವರ್ಷದ ಸುರತ್ಕಲ್‌ನ ಮಹಿಳೆ ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲವು ರಾಜ್ಯಗಳಲ್ಲಿ ಸುತ್ತಾಟ 

ಭಾನುವಾರ ಪಾಸಿಟಿವ್ ಆಗಿ ವರದಿಯಾಗಿದ್ದ ಮಂಗಳೂರು ಜೆಪ್ಪಿನಮೊಗರು ಜೆಪ್ಪು ಪಟ್ನ ನಿವಾಸಿ ಯುವಕನ(ಪಿ-1094) ಪ್ರಯಾಣದ ವಿವರಗಳು ಲಭ್ಯವಾಗಿವೆ. ಆತ ದೆಹಲಿಯಿಂದ ಮಂಗಳೂರಿಗೆ ಲಭ್ಯವಾದ ವಾಹನಗಳಲ್ಲಿ ದಾರಿಯುದ್ದಕ್ಕೂ ಟ್ರಕ್, ಕಾರು ಇತ್ಯಾದಿಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರವೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಯಚೂರು, ಹಾಸನ ಮೂಲಕ ಪ್ರಯಾಣಿಸಿ ಮಂಗಳೂರು ತಲುಪಿದ್ದಾರೆ. ಮೇ 8ರಂದು ದೆಹಲಿಯಿಂದ ಹೊರಟಿದ್ದು ಮೇ 13ಕ್ಕೆ ಮಂಗಳೂರು ಬಂದಿದ್ದರು. ಮನೆಯವರ ಒತ್ತಾಯದ ಮೇರೆಗೆ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಕೆಲ ತಿಂಗಳಲ್ಲಿ ವಿವಾಹವೂ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ.

ಬಂಟ್ವಾಳ ನಿವಾಸಿ ಬಿಡುಗಡೆ

ಬಂಟ್ವಾಳ ಕಸ್ಬಾ ನಿವಾಸಿ 76 ವರ್ಷದ(ಪಿ-578) ವೃದ್ಧರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಮೇ 1ರಂದು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಬಳಿಕ ಮೇ 14 ಹಾಗೂ ಮೇ 16ರಂದು ಎರಡು ಬಾರಿ ಗಂಟಲು ದ್ರವ ಮಾದರಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

5000 ದಾಟಿತು ಒಟ್ಟು ಪರೀಕ್ಷೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಮಾಡಲಾದ ಒಟ್ಟು ಸ್ಯಾಂಪಲ್ ಪರೀಕ್ಷೆ 5000 ದಾಟಿದೆ. ಕಳುಹಿಸಲಾದ 5151 ಸ್ಯಾಂಪಲ್‌ಗಳಲ್ಲಿ 5022 ಫಲಿತಾಂಶ ಆಗಮಿಸಿದೆ. ಸೋಮವಾರ 51 ಮಂದಿಯ ತಪಾಸಣೆ ನಡೆಸಿದ್ದು ಎನ್‌ಐಟಿಕೆಯಲ್ಲಿ 33, ಇಎಸ್‌ಐನಲ್ಲಿ 9 ಮಂದಿ ನಿಗಾವಣೆಯಲ್ಲಿದ್ದಾರೆ.

ದ.ಕ ಕೋವಿಡ್ ರೌಂಡಪ್

ಒಟ್ಟು ಪ್ರಕರಣ-54

ಇತರ ಜಿಲ್ಲೆ ರಾಜ್ಯದ್ದು-6

ದ.ಕ ಮಾತ್ರ-48

ಗುಣಮುಖರಾದವರು-17

ಸಾವು-5

ಆಸ್ಪತ್ರೆಯಲ್ಲಿರುವವರು-32

ಕಾಸರಗೋಡಿನ ಇಬ್ಬರಿಗೆ ವೈರಸ್

ಕಾಸರಗೋಡು: ಮುಂಬೈಯಿಂದ ಮೇ 15ರಂದು ಬಂದು ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ ಜಿಲ್ಲೆಯ ಪೈವಳಿಕೆ ನಿವಾಸಿಗಳಾದ 28 ವರ್ಷ ಪ್ರಾಯದ ಇಬ್ಬರಿಗೆ ಸೋಮವಾರ ಕರೊನಾ ಸೋಂಕು ಖಚಿತವಾಗಿದೆ. ಅವರನ್ನು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2,456 ಮಂದಿ ನಿಗಾದಲ್ಲಿದ್ದಾರೆ. ಕೇರಳದಲ್ಲಿ ಸೋಮವಾರ 29 ಹೊಸ ಪ್ರಕರಣ ದಾಖಲಾಗಿದೆ.