ಜಿಲ್ಲೆ

ದ.ಕ ಜಿಲ್ಲಾ ಕಾಂಗ್ರೆಸ್‌ನಿಂದ ನವ ಸಂಕಲ್ಪ ಶಿಬಿರ

ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ನಗರ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ದ.ಕ ಜಿಲ್ಲಾ ನವ ಸಂಕಲ್ಪ ಶಿಬಿರ ಜರುಗಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಶಿಬಿರ ಉದ್ಘಾಟಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದದ ಗರಿಬಿಚ್ಚುವ ಕೆಲಸ ಕೆಲವು ಶಕ್ತಿಗಳು ಮಾಡುತ್ತಿದ್ದು, ಇದನ್ನು ತಡೆದು ಶಾಂತಿ-ಸೌಹಾರ್ದ ನೆಲೆ ನಿಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂದಡಿಯಿಡಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಪಕ್ಷದ ವೇದಿಕೆಯಡಿ ಚರ್ಚಿಸಿ ಬಗೆಹರಿಸಿ, ಮುಂದಿನ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸುವ ನಿಟ್ಟಿನಲ್ಲಿ ನವ ಸಂಕಲ್ಪ ಶಿಬಿರ ಮುನ್ನುಡಿಯಾಗಬೇಕು ಎಂದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಮೂಲಕ ಹಿಂದುತ್ವದ ಪ್ರಯೋಗಾಲಯವಾಗಿರುವ ದ.ಕ ಜಿಲ್ಲೆ ಇಂದು ಯಾವ ಪರಿಸ್ಥಿತಿಗೆ ಬಂದು ತಲುಪಿದೆ ಎನ್ನುವುದನ್ನು ಅವಲೋಕಿಸಬೇಕಿದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ, ದ.ಕ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪ್ರಮುಖರಾದ ಪಿ.ವಿ.ಮೋಹನ್, ಜೆ.ಆರ್.ಲೋಬೋ, ಅಭಯಚಂದ್ರ ಜೈನ್, ಐವನ್ ಡಿಸೋಜ, ಮೊಯ್ದಿನ್ ಬಾವಾ, ಶಕುಂತಳಾ ಶೆಟ್ಟಿ, ಇನಾಯತ್ ಅಲಿ, ಜಿ.ಎ.ಬಾವಾ, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಮೊದಲಾದವರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.