ಜಿಲ್ಲೆ

ದಕ್ಷ ಕಾಲೇಜಿನಲ್ಲಿ ‘ದಕ್ಷ ದ್ವಿತಿ’ ರಾಜ್ಯಮಟ್ಟದ ಕಾಲೇಜು ಸ್ಪರ್ಧೆ : ಮೈಸೂರಿನ ಶೇಷಾದ್ರಿಪುರಂ ಕಾಲೇಜು ತಂಡ ಚಾಂಪಿಯನ್

ಮೈಸೂರು: ನಗರದ ದಕ್ಷ ಕಾಲೇಜಿನಲ್ಲಿ ಎರಡು ದಿನಗಳ ಕಾಲ ದಕ್ಷ ದ್ವಿತಿ 2025 ಸೀಸನ್-2 ರಾಜ್ಯಮಟ್ಟದ ಕಾಲೇಜು ಸ್ಪರ್ಧೆ ಆಯೋಜಿಸ ಲಾಗಿತ್ತು.

ಸ್ಪರ್ಧೆಯನ್ನು ಗುರುವಾರ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ ಮಾತನಾಡಿ, ನಾಗಾಲೋಟದಲ್ಲಿ ಜಿಗಿಯುತ್ತಿರುವ ಇಂದಿನ ಪ್ರಪಂಚದಲ್ಲಿ ವಿದ್ಯಾರ್ಥಿಗಳ ಜ್ಞಾನ ಮತ್ತು ಮಾನಸಿಕ ವಿಕಾಸಕ್ಕೆ ಸ್ಪರ್ಧೆಗಳು ಅಗತ್ಯ ಅಷ್ಟೇ ಅಲ್ಲ ಅನಿವಾರ್ಯ ಕೂಡ ಎಂದು ಬಣ್ಣಿಸಿದರು.

ಮೈಸೂರು ವಿಶ್ವವಿದ್ಯಾಲಯದ ಬಹದ್ದೂರ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಪ್ರಾಧ್ಯಾಪಕ ಡಾ.ಡಿ.ಆನಂದ್ ಮಾತನಾಡಿ, ಒಂದು ಕಡೆ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳು ಗಮನ ಕೊಡುವುದಿಲ್ಲ ಎಂಬ ಕೂಗು ಕೇಳಿ ಬರುತ್ತಿದ್ದರೆ, ಇಲ್ಲಿ ಇಂದು ಮತ್ತು ನಾಳೆ ನಡೆಯುವ ಸ್ಪರ್ಧೆಗಳಿಗೆ ಸೇರಿರುವ ಸಮೂಹವನ್ನು ನೋಡಿದಾಗ ಆ ಮಾತು ಸುಳ್ಳು ಅನ್ನಿಸುತ್ತದೆ. ಸ್ಪರ್ಧೆಗಳಲ್ಲಿ ಗೆಲುವು ಕೆಲವರಿಗೆ ಮಾತ್ರ. ಹಾಗಾಗಿ ಗೆದ್ದವರಿಂದ ಕಲಿಯುವಂತದ್ದು ಸಾಕಷ್ಟು ಇರುತ್ತದೆ ಎಂಬುದಕ್ಕಾಗಿಯಾದರೂ ಸ್ಪರ್ಧೆಯಲ್ಲಿ ನಾವು ಭಾಗಿಯಾಗಬೇಕು. ಅಂಥ ಮನಸ್ಥಿತಿ ಜೀವನದಲ್ಲಿ ಗೆಲುವು ತರುತ್ತದೆ ಎಂದು ಭರವಸೆ ತುಂಬಿದರು.

ದಕ್ಷ ಕಾಲೇಜು ಮತ್ತು ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪಿ.ಜಯಚಂದ್ರ ರಾಜು ಮಾತನಾಡಿ, ವಿದ್ಯಾರ್ಥಿಜೀವನ ಎಂದರೆ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಭದ್ರಬುನಾದಿಯನ್ನು ಸಿದ್ಧ ಮಾಡಿಕೊಳ್ಳುವಂತಹ ಹಂತ. ಇಂತಹ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮೊಬೈಲ್ ನಿಂದ ಹೊರಬಂದು ಇಂತಹ ಸ್ಪರ್ಧೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ವೇದಿಕೆಯಲ್ಲಿ ದಕ್ಷ ಕಾಲೇಜಿನ ಕಾರ್ಯದರ್ಶಿ ಸೋನಿಯಾ ಉಮಾಪತಿ, ದಕ್ಷ ಕಾಲೇಜಿನ ಉನ್ನತ ಶಿಕ್ಷಣ ವಿಭಾಗದ ನಿರ್ದೇಶಕ ಪಿ.ಹರೀಶ್, ದಕ್ಷ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಮಹೇಶ ಇದ್ದರು.

ಶೇಷಾದ್ರಿಪುರಂ ಕಾಲೇಜು ಚಾಂಪಿಯನ್: ರಾಜ್ಯದ ಬೆಂಗಳೂರು, ಹಾಸನ, ಕೊಡಗು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಕಾಲೇಜುಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಶೇಷಾದ್ರಿಪುರಂ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಎರಡನೇ ಸ್ಥಾನವನ್ನು ಮೈಸೂರಿನ ಮೈಕಾ ಮತ್ತು ಸೇಪಿಯಂಟ್ ಕಾಲೇಜಿನ ತಂಡಗಳು ಹಂಚಿಕೊಂಡವು.