ಜಿಲ್ಲೆ

ದೈವೀವನವೀಗ ದುರ್ಗಮ: ನಿರ್ವಹಣೆ ಇಲ್ಲದೆ ಸೊರಗಿದ ವ್ಯವಸ್ಥೆ : ಆವರಿಸಿದೆ ಗಿಡಗಂಟಿ

ಸೌಮ್ಯ ಆರ್

ಸಂದೀಪ್ ಸಾಲ್ಯಾನ್ ಬಂಟ್ವಾಳ

ಅರಣ್ಯ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ ನರಹರಿ ಪರ್ವತದಲ್ಲಿ ನಿರ್ಮಾಣಗೊಳಿಸಿದ ದೈವೀವನ ನಿರ್ವಹಣೆ ಇಲ್ಲದೆ ಸೊರಗಿದೆ. ದೈವೀ ವನದೊಳಗೆ ಕಳೆಗಿಡಗಳು, ಪೊದೆಗಳು ಬೆಳೆದು ಕ್ಷೇತ್ರಕ್ಕೆ ಬರುವ ಭಕ್ತರು ಪ್ರವೇಶಿಸದ ಸ್ಥಿತಿಗೆ ತಲುಪಿದೆ. ಕಳೆ ಗಿಡಗಳು ತುಂಬಿಕೊಂಡು ದೈವೀವನ ಮಿನಿ ಅರಣ್ಯವಾಗಿ ಪರಿವರ್ತನೆಗೊಂಡಿದೆ!

ಪೌರಣಿಕ ಹಿನ್ನೆಲೆ ಹೊಂದಿರುವ ಭೂಕೈಲಾಸ ಪ್ರಸಿದ್ಧಿಯ ನರಹರಿ ಪರ್ವತದಲ್ಲಿ ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆ ವತಿಯಿಂದ ದೈವೀವನವನ್ನು ನಿರ್ಮಿಸಲಾಗಿದೆ. ಬೆಟ್ಟವೇರಿ ಬರುವ ಭಕ್ತರು ದೇವರ ದರ್ಶನದ ಬಳಿಕ ಮರಗಿಡಗಳ ಮಡಿಲಿನಲ್ಲಿ ಪ್ರಕೃತಿಯ ಸೌಂದರ್ಯ ಆಸ್ವಾದಿಸಲು ವಿವಿಧ ಜಾತಿಯ ಮರಗಳನ್ನು ನೆಟ್ಟು ದೈವಿ ವನವನ್ನು ನಿರ್ಮಿಸಲಾಗಿದೆ. ದೈವೀವನಕ್ಕೆ ಭೇಟಿ ನೀಡುವ ಜನರು ಕುಳಿತು ವೀಕ್ಷಿಸಲು ಸಿಮೆಂಟ್ ಬೆಂಚು, ಪ್ಯಾರಗೋಲಗಳನ್ನು ಅಳವಡಿಸಲಾಗಿದೆ. ಕ್ಷೇತ್ರದ ಹಿನ್ನೆಲೆಯ ಮಾಹಿತಿ ಫಲಕ ಅಳವಡಿಸಲಾಗಿದೆ. ಆದರೆ ದೈವೀವನದ ನಿರ್ವಹಣೆ ಇಲ್ಲದೆ ಪೊದೆಗಳು ಬೆಳೆದು ಹಾವು, ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಒಳಪ್ರವೇಶಿಸಲಾಗದ ಸ್ಥಿತಿ

ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರು ದೈವೀವನಕ್ಕೂ ಬಂದು ಕೆಲಹೊತ್ತು ಇದ್ದು ಆಯಾಸ ಪರಿಹರಿಸಿಕೊಂಡು, ಅಲ್ಲಿರುವ ಮಾಹಿತಿ ಫಲಕದಲ್ಲಿರುವ ಕ್ಷೇತ್ರದ ಇತಿಹಾಸವನ್ನು ತಿಳಿದುಕೊಂಡು ಹೋಗುತ್ತಾರೆ. ಆದರೆ ಈ ಭಾರಿ ನಿರ್ವಹಣೆ ಮಾಡದ ಕಾರಣ ಅದರ ಒಳಪ್ರವೇಶಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಬಣ್ಣ ಮಾಸಿದ ದೈವೀವನ ಎನ್ನುವ ನಾಮಫಲಕವೊಂದು ಕಾಣುತ್ತಿದೆ, ಅದನ್ನು ಹೊರತು ಪಡಿಸಿದರೆ ನಿರ್ವಹಣೆಯಿಲ್ಲದೆ ಮಿನಿ ಅರಣ್ಯವೊಂದು ಅದರೊಳಗೆ ಸೃಷ್ಟಿಯಾಗಿದೆ.

ರಮಾನಾಥ ರೈ ಕನಸಿನ ಯೋಜನೆ

ಬಿ.ರಮಾನಾಥ ರೈ ಅರಣ್ಯ ಸಚಿವರಾಗಿದ್ದಾಗ ಅವರ ಕನಸಿನ ಯೋಜನೆಯಂತೆ ಈ ದೈವೀವನ ನಿರ್ಮಾಣಗೊಂಡಿದೆ. ಎರಡೂ ಪರ್ವತ ಕ್ಷೇತ್ರಗಳಾದ ಕಾರಿಂಜ ಕ್ಷೇತ್ರ ಹಾಗು ನರಹರಿ ಪರ್ವತ ಕ್ಷೇತ್ರಗಳಲ್ಲಿ ದೈವೀವನ ನಿರ್ಮಿಸಲಾಗಿದೆ. ಪರ್ವತದ ತಪ್ಪಲಿನಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಅನುಕೂಲದ ದೃಷ್ಟಿಯಿಂದ ಒಂದಷ್ಟು ಅಮೂಲ್ಯ, ಅಪೂರ್ವ ಗಿಡ, ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳನ್ನು ನೆಟ್ಟು ಪೋಷಿಸುವುದರ ಜತೆಗೆ ಅವುಗಳ ಮಹತ್ವ ಹಾಗೂ ಕ್ಷೇತ್ರ ಪರಿಚಯವನ್ನು ತಿಳಿದುಕೊಳ್ಳುವ ಉದ್ದೇಶದಿಂದ ದೈವೀವನ ನಿರ್ಮಿಸಲಾಗಿದೆ.

ದೈವೀವನದ ನಿರ್ವಹಣೆಯನ್ನು ಅರಣ್ಯ ಇಲಾಖೆಯೇ ನೋಡಿಕೊಳ್ಳುತ್ತಿದ್ದು, ದೈವೀವನದ ನಿರ್ವಹಣೆ ನೋಡಿಕೊಳ್ಳಲೆಂದೇ ವಾಚರ್ ಒಬ್ಬರನ್ನು ನೇಮಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ಅದರಲ್ಲಿ ಕಳೆಗಿಡಗಳನ್ನು ತೆರವು ಮಾಡಲಾಗುವುದು. ಇಷ್ಟರವರೆಗೆ ಪೇಂಟಿಂಗ್‌ಗೆ ಅನುದಾನ ಬಂದಿರಲಿಲ್ಲ. ಈ ವರ್ಷ ಬಂದಲ್ಲಿ ಪೇಂಟಿಂಗ್ ಮಾಡಲಾಗುವುದು. ಸುನೀಲ್ ಡಿಸೋಜ ಬಂಟ್ವಾಳ ವಲಯ ಅರಣ್ಯಾಧಿಕಾರಿ