ವಿಜಯವಾಣಿ ಸುದ್ದಿಜಾಲ ನಂದಗುಡಿ
ಕೃಷಿಕರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮದ ಜತೆಗೆ ರೈತರು ಆರ್ಥಿಕವಾಗಿ ಪ್ರಗತಿ ಕಾಣಬಹುದು ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎನ್.ಧರ್ಮೇಶ್ ಹೇಳಿದರು.
ಹೋಬಳಿಯ ಕೊಂಡ್ರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಕೊಂಡ್ರಹಳ್ಳಿ ಸಂಘವು 2022-23ನೇ ಸಾಲಿನಲ್ಲಿ ಒಟ್ಟು 7.52 ಲಕ್ಷ ರೂ. ಲಾಭ ಹಾಗೂ 3.36 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಹಾಲು ಉತ್ಪಾದಕರಿಗೆ ಸರ್ಕಾರ ಮತ್ತು ಬಮುಲ್‌ನಿಂದ ಹೆಚ್ಚುವರಿ ಪ್ರೋತ್ಸಾಹಧನ ನೀಡಿ ಆರ್ಥಿಕಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದರು.
ಹೊಸಕೋಟೆ ಶಿಬಿರದ ಮಾರ್ಗ ವಿಸ್ತರಣಾಧಿಕಾರಿ ಕೆ.ಆರ್.ರಮೇಶ್ ಮಾತನಾಡಿ, ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ ನೀಡುವ ಮೂಲಕ ರೋಗಗಳು ಬಾರದಂತೆ ಎಚ್ಚರಿಕೆವಹಿಸಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಹಾಲು ಉತ್ಪಾದಿಸಿದರೆ ಲಾಭ ಗಳಿಸಲು ಸಾಧ್ಯ ಎಂದರು.
ಸಂಘಕ್ಕೆ ಅತಿಹೆಚ್ಚು ಹಾಲು ಪೂರೈಸಿದ ಕೃಷ್ಣಮೂರ್ತಿ ಅವರಿಗೆ 10,578 ರೂ. ಬೋನಸ್ ನೀಡಿ ಸನ್ಮಾನಿಸಲಾಯಿತು.
ನಿರ್ದೇಶಕರಾದ ಕೆ.ಮಂಜುನಾಥ್, ಎನ್.ಗಂಗಾಧರ್, ನಾಗರಾಜುಕೆ.ಎಸ್, ಕೆ.ಸೋಮಣ್ಣ, ವೆಂಕಟಶಾಮಪ್ಪ, ಕೆ.ಎನ್.ಮಂಜುನಾಥ್, ಕೆ.ಎನ್.ರಮೇಶ್, ಬಿ.ನಾರಾಯಣಪ್ಪ, ಪಿ.ಮಂಜುಳಾ, ಸರಸ್ವತಮ್ಮ ಮುಖ್ಯಶಿಕ್ಷಕ ಬಾಲಾಜಿ, ಮುಖ್ಯ ಕಾರ್ಯನಿರ್ವಾಹಕ ಪುರುಷೋತ್ತಮ್, ಹಾಲು ಪರೀಕ್ಷಕ ಗಿಡ್ಡಪ್ಪ, ಸಹಾಯಕ ಚಂದ್ರಪ್ಪ ಇದ್ದರು.