ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಕರಾವಳಿ ಭಾಗದಲ್ಲಿ ಹೈನುಗಾರಿಕೆ ಉದ್ಯಮ ಹಲವು ಸಮಸ್ಯೆ ಎದುರಿಸುತ್ತಿದ್ದು, ಪಶು ವೈದ್ಯ ಇಲಾಖೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ರೈತಾಪಿ ವರ್ಗದವರಿಗೆ ತೀವ್ರ ತೊಂದರೆಯಾಗಿದೆ ಎಂದು ಕಾಡೂರು ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ ಹೇಳಿದರು.
ಕಾಡೂರು ಗ್ರಾಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲಾಖಾ ಹಂತದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿಯೋಜನೆಗೆ ವಿನಂತಿಸಲಾಗುವುದು. ಪ್ರಸ್ತುತ ಇರುವ ವೈದ್ಯರು ಹಾಗೂ ಸಿಬ್ಬಂದಿಗೆ ಅತ್ಯಧಿಕ ಕಾರ್ಯದೊತ್ತಡವಿದ್ದು ದೂರದ ಗ್ರಾಮೀಣ ಪ್ರದೇಶಗಳಿಗೆ ಸಕಾಲಿಕವಾಗಿ ಸ್ಪಂದಿಸಲು ಸಾಧ್ಯವಾಗದೆ ರೈತರಿಗೆ ತೊಂದರೆಯಾಗಿದೆ. ಪಶುಸಖಿ ಸೇರಿದಂತೆ ಪರ್ಯಾಯ ವ್ಯವಸ್ಥೆ ಅಗತ್ಯವಾಗಿದೆ ಎಂದರು.
ಆರೋಗ್ಯ ಸಮುದಾಯ ಅಧಿಕಾರಿ ಮಂಜುಳಾ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷಯ ಮುಕ್ತವನ್ನಾಗಿಸಲು ಈಗಾಗಲೇ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಒಂದು ಪ್ರಕರಣವಿದ್ದು ಆರೋಗ್ಯ ಕಿಟ್ ಸೇರಿದಂತೆ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮೀನಾಕ್ಷಿ, ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತ ಶಶಿಧರ್, ಶಿಕ್ಷಣ ಇಲಾಖೆ ಸಂಯೋಜಕ ನಾಗರಾಜ ಭಟ್ ಇಲಾಖಾ ಮಾಹಿತಿ ನೀಡಿದರು. ವಿವಿಧ ಇಲಾಖಾಧಿಕಾರಿಗಳು, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಕೆ. ನಿರೂಪಿಸಿದರು.