ಜಿಲ್ಲೆ

ಹೈನುಗಾರಿಕೆ ರೈತರ ಬದುಕಿನ ದಾರಿ

ಬೇತಮಂಗಲ: ಕೃಷಿ ಮತ್ತು ತೋಟಗಾರಿಕೆ ಸೇರಿ ಯಾವುದೇ ಬೆಳೆ ಮಾಡಿದರೂ ನಷ್ಟ್ಟ ಅನುಭವಿಸುತ್ತಿರುವ ಈಗಿನ ಸಂಧರ್ಭದಲ್ಲಿ ರೈತರ ಜೀವನಕ್ಕೆ ದಾರಿ ತೋರಿಸುತ್ತಿರುವ ಏಕೈಕ ಕೃಷಿ ಎಂದರೆ ಅದು ಹೈನೋದ್ಯಮವಾಗಿದೆ ಎಂದು ಕೋಮುಲ್​ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ತಿಳಿಸಿದರು.

ಕೆಜಿಎಫ್​ ತಾಲೂಕು ವಡ್ಡರಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ತಂದೆ ಎಂ.ವಿ.ಕೃಷ್ಣಪ್ಪ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ದೂರದೃಷ್ಟಿಯಿಂದ ಡೆನ್ಮಾರ್ಕ್​ನಿಂದ ಎಚ್​.ಎ್​ ತಳಿ ಹಸುಗಳನ್ನು ತಂದು ಇಲ್ಲಿ ಜನರಿಗೆ ಮಾಹಿತಿ ಅರುಹಿದ ಪರಿಣಾಮ ಇಂದು ದೇಶದಲ್ಲಿ ಹಸುಗಳನ್ನು ಸಾಕಿರುವ ಲಕ್ಷಾಂತರ ಮಂದಿ ಹಾಲು ಉತ್ಪಾದನೆ ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ವಿಶೇಷವಾಗಿ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಉಪಕಸುಬು ಎನ್ನಲಾಗುತ್ತಿದೆ. ಹಾಲು ಉತ್ಪಾದನೆ ಇದೀಗ ಮುಖ್ಯ ಕಸುಬಾಗಿ ಪರಿವರ್ತನೆಯಾಗಿದ್ದು ಜೀವನಕ್ಕೆ ದಾರಿಯಾಗಿದೆ ಎಂದರು.

ಕೋಲಾರ ಹಾಲು ಒಕ್ಕೂಟದ ಡೇರಿಗಳಿಗೆ ಹಾಲು ಹಾಕುವುದರಿಂದ ರೈತರಿಗೆ ಹಲವಾರು ಅನುಕೂಲಗಳು ಆಗುತ್ತಿವೆ. ಹೀಗಾಗಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ನಿಮ್ಮ ಡೇರಿಯನ್ನು ನೀವೇ ಪ್ರೋತ್ಸಾಹಿಸಿ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ತಾಲೂಕು ಉಪ ವ್ಯವಸ್ಥಾಪಕ ಗಿರೀಶ್​ ಮಾತನಾಡಿ, ಹಾಲು ಒಕ್ಕೂಟದ ಕಡೆಯಿಂದ ಹಲವಾರು ಸೌಲಭ್ಯಗಳು ಸಿಗುತ್ತಿವೆ. ಒಕ್ಕೂಟದಿಂದ ವೈಜ್ಞಾನಿಕವಾಗಿ ಸಂಸ್ಕರಿಸಿ ನೀಡುವ ಉತ್ತಮ ಪೌಷ್ಟಿಕಾಂಶ ಹೊಂದಿರುವ ಮೇವು ಮತ್ತು ಇತರೆ ಪಶು ಆಹಾರಗಳನ್ನು ರಾಸುಗಳಿಗೆ ನೀಡುವ ಮೂಲಕ ಗುಣಮಟ್ಟದ ಹಾಗೂ ಹೆಚ್ಚು ಹಾಲು ಉತ್ಪಾದನೆ ಮಾಡಿಕೊಳ್ಳಬಹುದಾಗಿದೆ ಎಂದರು.

ವಿಸ್ತರಣಾಧಿಕಾರಿ ನಟರಾಜ್​ ಮಾತನಾಡಿ, ವದ್ದರಹಳ್ಳಿಹಾಲು ಉತ್ಪಾದಕರ ಸಹಕಾರ ಸಂಘವು ತಾಲೂಕಿನಲ್ಲಿ ಅತಿ ಹೆಚ್ಚು ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದೆ. ರೈತರಿಗೂ ಅತಿ ಹೆಚ್ಚು ಬೋನಸ್​ ನೀಡಲಾಗುತ್ತಿದೆ ಎಂದರು.

ಅಧ್ಯಕ್ಷ ಸುಂದರಪ್ಪ ಮಾತನಾಡಿ, ರೈತರು ಗುಣಮಟ್ಟದ ಹಾಲು ಪೂರೈಸುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ಇರುವ ಕಾರಣಕ್ಕೆ ಸೊಸೈಟಿ ಉತ್ತಮವಾಗಿ ನಡೆಯುತ್ತಿದ್ದು ತಾಲೂಕಿನಲ್ಲಿ ಹೆಚ್ಚು ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದರು.

ಕಾರ್ಯದರ್ಶಿ ಗೋಪಾಲಕೃಷ್ಣ ಮಾತನಾಡಿ, ಈ ವರ್ಷ ರೈತರಿಗೆ 15 ಲಕ್ಷ ರೂ. ಬೋನಸ್​ ನೀಡಲಾಗಿದೆ. ಈಗಾಗಲೇ 40 ಲಕ್ಷ ರೂ. ಬ್ಯಾಂಕ್​ನಲ್ಲಿ ಜಮೆ ಮಾಡಲಾಗಿದ್ದು, ಮತ್ತೆ 40 ಲಕ್ಷ ರೂ. ಜಮೆ ಮಾಡುವ ಮೂಲಕ ಸುಮಾರು1 ಕೋಟಿ ರೂ. ಉಳಿತಾಯ ಮಾಡುವ ಗುರಿ ಹೊಂದಲಾಗಿದೆ ಎಂದರು. ಸೊಸೈಟಿ ಸಿಬ್ಬಂದಿ, ನಿರ್ದೇಶಕರು ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.