ಹನೂರು: ಹೈನುಗಾರಿಕೆ ಹನೂರು ಭಾಗದ ರೈತರ ಜೀವನಾಡಿಯಾಗಿದ್ದು, ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಹೋಬಳಿ ಕೇಂದ್ರ ರಾಮಾಪುರ ಗ್ರಾಮದಲ್ಲಿ ಭಾನುವಾರ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 49.80 ಲಕ್ಷ ರೂ. ವೆಚ್ಚದ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹನೂರು ಕೃಷಿ ಅವಲಂಬಿತ ಪ್ರದೇಶ. ಇಲ್ಲಿ ಹೆಚ್ಚಿನ ರೈತರು ಕೃಷಿಯ ಜತೆಗೆ ಜೀವನೋಪಾಯಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ತಾಲೂಕಿನಲ್ಲಿ ಪ್ರತಿದಿನ 65 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಈ ಮೂಲಕ ಹೈನುಗಾರಿಕೆ ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ಹೈನುಗಾರಿಕೆ ಹಾಗೂ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ತಾಲೂಕಿನಲ್ಲಿ ಒಬ್ಬರೇ ಪಶು ವೈದ್ಯರು ಇದ್ದಾರೆ. ವೈದ್ಯ, ಸಿಬ್ಬಂದಿ ಕೊರತೆ ಇದೆ. ಈಗಿದ್ದರೂ ಡಾ.ಸಿದ್ದರಾಜು ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು. ಜಿಲ್ಲಾ ಉಸ್ತುವಾರಿಯಾದ ಕೆ.ವೆಂಕಟೇಶ್ ಅವರು ಇಲಾಖೆಯ ಸಚಿವರಾಗಿದ್ದು, ವೈದ್ಯ, ಸಿಬ್ಬಂದಿ ಕೊರತೆಯ ಬಗ್ಗೆ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ರಸ್ತೆ ಅಭಿವೃದ್ಧಿಗೆ ಕ್ರಮ: ಹನೂರು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ತಾಲೂಕಾಗಿದ್ದು, ಅಂತರಾಜ್ಯ ಹೆದ್ದಾರಿಯನ್ನು ಹೊಂದಿದೆ. ಹೆಚ್ಚು ವಾಹನಗಳು ಸಂಚರಿಸುತ್ತವೆ. ಈ ದೆಸೆಯಲ್ಲಿ ರಾಮಾಪುರ- ನಾಲ್‌ರೋಡ್ ರಸ್ತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಅಂತಾರಾಜ್ಯ ಸಂಪರ್ಕ ಹೆಚ್ಚಾದಾಗ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೇ ಹಾಳಾಗಿರುವ ರಸ್ತೆ ಅಭಿವೃದ್ಧಿ ಸಂಬಂಧ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು, ಮುಖಂಡರಾದ ಮಹದೇವ, ಚಿನ್ನವೆಂಕಟ, ಚಂದ್ರಮುರಳಿ, ಶ್ರೀರಂಗ, ಅನಿಲ್, ಸುಬ್ರಹ್ಮಣ್ಯ, ಪಾಂಡಿಯನ್, ರವಿ, ಆನಂದ, ಸುರೇಂದ್ರ, ವೆಂಕಟೇಶ್, ಮುತ್ತುರಾಜಮ್ಮ, ಹಾಗೂ ಇನ್ನಿತರರು ಇದ್ದರು.