ಜಿಲ್ಲೆ

ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಸಹಕಾರಿ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ರೈತರ ಸ್ವಾವಲಂಬಿ ಬದುಕಿಗೆ ಕೃಷಿ ಜತೆ ಹೈನುಗಾರಿಕೆಯೂ ಸಹಕಾರಿಯಾಗಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ತಾಲೂಕು ಸೇರಿ ರಾಷ್ಟ್ರಾದ್ಯಂತ ಆರಂಭವಾಗಿರುವ 21ನೇ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಶುಪಾಲನೆ ಕೃಷಿ ಚುಟುವಟಿಕೆಗೆ ಪೂರಕವಾದರೆ,ಲಾಭದಾಯಕವಾದ ಹೈನೋದ್ಯಮ ಬದುಕಿಗೆ ಆಸರೆಯಾಗಲಿದೆ. ಈ ಸಲುವಾಗಿ ಸರ್ಕಾರ ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಮೂಲಕ ವಿವಿಧ ಸೌಲಭ್ಯ ಕಲ್ಪಿಸಿ ಉತ್ತೇಜಿಸುವ ಕೆಲಸ ಮಾಡುತ್ತಿದೆ. ರೈತರು ಕೃಷಿ ಜತೆ, ಜತೆಗೆ ಕುರಿ, ಮೇಕೆ, ಹಸು, ಕೋಳಿ ಸಾಕಾಣಿಕೆಗೆ ಒತ್ತು ನೀಡಬೇಕು ಎಂದರು.

ಇಒ ಡಾ.ಆರ್.ದೇವೇಂದ್ರಪ್ಪ ಮಾತನಾಡಿ, ಜಾನುವಾರು ಗಣತಿ ಕಾರ್ಯ ಏಕ ಕಾಲದಲ್ಲಿ ರಾಷ್ಟ್ರಾದ್ಯಂತ ಆರಂಭವಾಗಿದೆ. ಫೆಬ್ರವರಿ ಅಂತ್ಯದವರೆಗೆ ನಡೆಯುವ ಗಣತಿ ಕಾರ್ಯದಲ್ಲಿ ಎಲ್ಲಾ ಜಾನುವಾರುಗಳ ಮಾಹಿತಿ ಸಂಗ್ರಹಿಸಿ ದಾಖಲೀಕರಿಸಲಾಗುವುದು ಎಂದರು.

ತರೀಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಲಿರುವ ಗಣತಿ ಕಾರ್ಯಕ್ಕೆ 17 ಜನ ಸಿಬ್ಬಂದಿ ಜತೆ 4 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಿಕೊಳ್ಳಲಾಗಿದ್ದು, ಗಣತಿ ತಂಡ 210 ಗ್ರಾಮಗಳು ಮಾತ್ರವಲ್ಲ, ಅಜ್ಜಂಪುರ ಹಾಗೂ ತರೀಕೆರೆ ಪಟ್ಟಣದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳ ವಿವರ ಪಡೆಯಲಿದೆ. ಅದಲ್ಲದೇ ಗಣತಿ ಸಮಯದಲ್ಲಿ ಕಂಡು ಬರುವ ಸಾಕು ಪ್ರಾಣಿಗಳು, ಕುಕ್ಕುಟಗಳು, ಬೀದಿ ನಾಯಿಗಳು, ಮೇಕೆ, ಕುರಿ ಜತೆ ಬೀಡಾಡಿ ದನಗಳ ಸಮಗ್ರ ಮಾಹಿತಿ ಕೂಡ ಸಂಗ್ರಹಿಸಲಿದೆ ಎಂದು ತಿಳಿಸಿದರು.

ತರೀಕೆರೆ ಪಶು ಮುಖ್ಯ ವೈದ್ಯಾಧಿಕಾರಿ ಡಾ.ಬಸಪ್ಪ ಜಲ್ಲೇರ್, ಅಜ್ಜಂಪುರ ಮುಖ್ಯ ವೈದ್ಯಾಧಿಕಾರಿ ಡಾ.ಶಶಿಧರ್, ಹೊಸಳ್ಳಿ ತಾಂಡ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗೋವಿಂದಪ್ಪ, ಶಾಸಕರ ಪತ್ನಿ ವಾಣಿ ಮತ್ತಿತರರಿದ್ದರು.