ಜಿಲ್ಲೆ

ಹೈನುಗಾರಿಕೆಯಲ್ಲೂ ಗ್ರಾಮಾಂತರ ಮುಂಚೂಣಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಕೃಷಿ, ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳ ಜತೆಗೆ ಹೈನುಗಾರಿಕೆಯಲ್ಲೂ ರೈತರು ಛಾಪು ಮೂಡಿಸುತ್ತಿದ್ದಾರೆ. ಪಶುಪಾಲನಾ ಇಲಾಖೆ ಮಾಹಿಯಂತೆ ಪ್ರಸ್ತುತ 1,17067 ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಪ್ರತಿ ದಿನ ಕನಿಷ್ಟ 5 ರಿಂದ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.

ಜಿಲ್ಲಾ ಪಶುಪಾಲನಾ ಇಲಾಖೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ, ಕಾಲಕಾಲಕ್ಕೆ ಜಾನುವಾರುಗಳ ಆರೋಗ್ಯ ತಪಾಸಣೆ, ಲಸಿಕಾ ಅಭಿಯಾನದ ಪರಿಣಾಮವಾಗಿ ಜಿಲ್ಲೆಯಲ್ಲಿ ಜಾನುವಾರು ಸಾವಿನ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಜಾನುವಾರುಗಳನ್ನು ಮಾರಣಾಂತಿಕವಾಗಿ ಕಾಡುವ ಕಾಲುಬಾಯಿ ರೋಗ, ಚರ್ಮಗಂಟು ರೋಗಗಳು ಶೂನ್ಯವಿರುವುದರಿಂದ ಹೈನುಗಾರರ ಅತಂಕವೂ ದೂರವಾಗಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಪಶುಸಖಿ ನೇಮಕ ಮಾಡಿದ್ದು, ಅವರು ಆಯಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಜಾನುವಾರುಗಳ ಆರೋಗ್ಯ ತಪಾಸಣೆ, ಲಸಿಕೆ ಹಾಕಿರುವ ಅಂಕಿಅಂಶ ಸೇರಿ ಹೈನುಗಾರಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಕಲೆ ಹಾಕಿ ಇಲಾಖೆಗೆ ವರದಿ ನೀಡುವುದರಿಂದ ಹೈನೋದ್ಯಮಕ್ಕೆ ಹೆಚ್ಚು ಸಹಕಾರಿಯಾಗಿದೆ ಪಶು ಇಲಾಖೆಯಲ್ಲಿ 105 ಪಶು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಪಶುಪಾಲನೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2.90 ಲಕ್ಷ ರೈತರಿಂದ ಪಶುಸಂಗೋಪನೆ: ಜಿಲ್ಲೆಯಲ್ಲಿ ಸುಮಾರು 2,90,551 ರೈತರು ಪಶುಸಂಗೋಪನೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ 1.17 ಲಕ್ಷ ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. 30199 ಕುಟುಂಬ ಕುರಿ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದರೆ, 23405 ಕುಟುಂಬ ಮೇಕೆ ಸಾಕಣೆಯ ಮೂಲಕ ಜೀವನಾಧಾರ ಕಂಡುಕೊಂಡಿದ್ದಾರೆ. ಇದರ ಜತೆಜತೆಗೆ ಕುಕ್ಕುಟೋದ್ಯಮವೂ ಪ್ರವರ್ಧಮಾನಕ್ಕೆ ಬರುತ್ತಿದ್ದು ಜಿಲ್ಲೆಯಲ್ಲಿ 38880 ಕುಟುಂಬ ಕೋಳಿ ಸಾಕಣೆ ಕಸುಬಿನಲ್ಲಿ ತೊಡಗಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಜತೆಜತೆಗೆ ಪಶುಪಾಲನೆಯತ್ತಲೂ ರೈತರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

2,93,876 ಜಾನುವಾರುಗಳಿಗೆ ಲಸಿಕೆ: 21ನೇ ಜಾನುವಾರು ಗಣತಿ ಪ್ರಕಾರ 1,70,720 ದನಗಳು, 14,924 ಎಮ್ಮೆಗಳು, 1,17,715 ಕುರಿಗಳು, 95 ಸಾವಿರ ಮೇಕೆಗಳು ಜಿಲ್ಲೆಯಲ್ಲಿದೆ. 2,93,876 ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಅಂದಾಜು 5.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಜಾನುವಾರು ವಿಮೆ ಸೌಲಭ್ಯವನ್ನು ಎಪಿಎಲ್ ಪಡಿತರ ಚೀಟಿಗೆ ಶೇ.50, ಬಿಪಿಎಲ್ ಪಡಿತರ ಚೀಟಿಗೆ ಶೇ.75 ನೀಡಲಾಗುತ್ತಿದೆ, 33785 ಹೈನುಗಾರರು ಸಕ್ರಿಯ ಪಟ್ಟಿಗೆ ಸೇರಿದ್ದು ಪ್ರತಿನಿತ್ಯ ಹಾಲು ಪೂರೈಕೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈನುಗಾರಿಕೆಯಲ್ಲಿ ಜಿಲ್ಲೆಯ ಸಾಕಷ್ಟು ರೈತರು ತೊಡಗಿಸಿಕೊಂಡಿದ್ದು ಅಂತಹ ರೈತರಿಗೆ ಕೃಷಿ ಚಟುವಟಿಕೆ ಜತೆಗೆ ಜಾನುವಾರು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ರೈತರಿಗೆ ಜಾನುವಾರು ಸಾಕಾಣಿಕೆ ಕುರಿತು ಮಾಹಿತಿ, ತರಬೇತಿ, ಕಾರ್ಯಾಗಾರಗಳನ್ನು ಏರ್ಪಡಿಸಿ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ, ಪ್ರೊತ್ಸಾಹಧನ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೆ.ಎಚ್.ಮುನಿಯುಪ್ಪ, ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಜತೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ, ಹಾಲು ಉತ್ಪಾದನೆಯಲ್ಲಿ ಜಿಲ್ಲೆಯೂ ಮುಂಚೂಣಿಯಲ್ಲಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಜಾನುವಾರುಗಳಿಗೆ ಪ್ರತಿ ಲಸಿಕೆಯನ್ನು ಕಡ್ಡಾಯವಾಗಿ ನೀಡುವುದರ ಮೂಲಕ ಆರೋಗ್ಯ ರಕ್ಷಣೆಗೆ ಅದ್ಯತೆ ನೀಡಲಾಗಿದೆ.

ಜಗದೀಶ್, ಪಶು ಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ