ಕೂಡಿಗೆ ಸಮೀಪದ ಕೆರೆಕೇರಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಉದ್ಘಾಟಿಸಿದರು. ಗಂಗಾಧರ, ಬಿ.ವಿ. ವೀಣಾ, ರೇಖಾ ಪ್ರಸಾದ್, ಪ್ರೀತಿ ಪ್ರದೀಪ್ ಇದ್ದರು. 
ಜಿಲ್ಲೆ

ಗುಣಮಟ್ಟದ ಹಾಲು ಪೂರೈಕೆಯಿಂದ ಡೇರಿ ಅಭಿವೃದ್ಧಿ

ಲೋಕೇಶ್ ಮನು. ಡಿ

ಕುಶಾಲನಗರ: ಕುಶಾಲನಗರ ತಾಲೂಕು ಕೂಡಿಗೆ ಸಮೀಪದ ಕೆರೆಕೇರಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆ ನಿರ್ದೇಶಕ ಕೆ.ಕೆ. ಹೇಮಂತ್‌ಕುಮಾರ್ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ಸದಸ್ಯರು ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಒಕ್ಕೂಟದ ವತಿಯಿಂದ ಸಹಕಾರ ಸಂಘಗಳಿಗೆ ಬೇಕಾಗುವ ಸೌಲಭ್ಯ ಒದಗಿಸಲಾಗುವುದು. ಸಂಘದ ಪ್ರಗತಿಗೆ ಸದಸ್ಯರು ಮುಖ್ಯ ಕಾರಣೀಭೂತರಾಗಿರುತ್ತಾರೆ. ಸಂಘದ ಬೆಳವಣಿಗೆಗೆ ಅನುಕೂಲವಾಗುವಂತೆ ಒಕ್ಕೂಟದ ಸಹಯೋಗದೊಂದಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸವಲತ್ತು ನೀಡಲಾಗುವುದು. ಇದರ ಬಳಕೆಯ ಮೂಲಕ ಸಂಘದ ಅಭಿವೃದ್ಧಿ ಮತ್ತು ಗ್ರಾಮದ ರೈತರ ಅರ್ಥಿಕ ಮಟ್ಟದ ಸುಧಾರಣೆ ಅನುಕೂಲಕರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹಾಸನ ಡೇರಿ ಸಹಾಯಕ ನಿರ್ದೇಶಕ ಗಂಗಾಧರ ಮಾತಾನಾಡಿ, ರೈತರ ಬದುಕಿಗೆ ಹೈನುಗಾರಿಕೆ ಮಹತ್ವಪೂರ್ಣವಾಗಿದೆ. ಇದಕ್ಕೆ ಪೂರಕವಾಗಿ ಸಮೀಪದಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘಗಳು ಇರುವುದರಿಂದ ಅವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹಾಲು ಉತ್ಪಾದಕರ ಸಂಘಗಳ ಕೊಡಗು ವಿಸ್ತರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ಹೈನುಗಾರಿಕೆ ಸಂಬಂಧಿಸಿದಂತೆ ಒಕ್ಕೂಟದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಹಸುಗಳಿಗೆ ಚಿಕಿತ್ಸಾ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೆರೆಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರೇಖಾ ಪ್ರಸಾದ್, ಉಪಾಧ್ಯಕ್ಷೆ ಪ್ರೀತಿ ಪ್ರದೀಪ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಹಿರಿಯ ವಿಸ್ತಾರಣಾಧಿಕಾರಿ ಎಸ್.ಪಿ.ಗಂಗಾಧರ್, ಕೂಡಿಗೆ ಡೇರಿ ವ್ಯವಸ್ಥಾಪಕ ನಂದಿಶ್, ಸಹಾಯಕ ವ್ಯವಸ್ಥಾಪಕ ಎಂ. ವೇಣುಗೋಪಾಲ, ಸಂಘದ ಕಾರ್ಯದರ್ಶಿ ಮಂಜಳಾ ಹಾಗೂ ಸಂಘದ ನಿರ್ದೇಶಕರು ಇದ್ದರು.