ಚನ್ನೇಗೌಡನದೊಡ್ಡಿ ಡೇರಿ ವಾರ್ಷಿಕ ಸಭೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ರೂಪಾ, ಎಸ್.ಮಹೇಶ್, ಶಂಕರಾಚಾರಿ, ಸಿ.ಎಸ್.ಪ್ರಕಾಶ್, ಎಸ್.ಶಿವರಾಜ್, ಚೆನ್ನಪ್ಪ, ಸಿ.ರಾಜಣ್ಣ, ಶಿವಣ್ಣ, ಸಿ.ಕವಿತಾ, ಜಯಲಕ್ಷ್ಮೀ,ರಾಜೇಶ್ವರಿ, ಎಸ್.ಕುಮಾರ್ ಇದ್ದರು. 
ಜಿಲ್ಲೆ

ಉತ್ತಮ ಹಾಲು ಪೂರೈಕೆಯಿಂದ ಡೇರಿ ಅಭಿವೃದ್ಧಿ

ಲೋಕೇಶ್ ಮನು. ಡಿ

ಮದ್ದೂರು: ಹಾಲು ಉತ್ಪಾದಕರು ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು ಎಂದು ಮನಮುಲ್ ನಿರ್ದೇಶಕಿ ರೂಪಾ ತಿಳಿಸಿದರು.


ಪಟ್ಟಣದ ಚನ್ನೇಗೌಡನದೊಡ್ಡಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಹಾಲು ಒಕ್ಕೂಟವು ಉತ್ಪಾದಕರಿಗೆ ಹಲವು ಸೌಲಭ್ಯ ಕಲ್ಪಿಸುತ್ತಿದ್ದು, ಇದರ ಸದುಪಯೋಗಕ್ಕೆ ಉತ್ಪಾದಕರು ಮುಂದಾಗಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಹಾಲು ಒಕ್ಕೂಟಕ್ಕೆ ಪ್ರತಿನಿತ್ಯ 11 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದ್ದು, ಜಿಲ್ಲೆಯ ಹಾಲು ದೆಹಲಿ ಮಾರುಕಟ್ಟೆಗೂ ವಿಸ್ತರಣೆಯಾಗಿದ್ದು, ಇದರಿಂದಾಗಿ ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗುವ ಜತೆಗೆ ಮುಂದಿನ ದಿನಗಳಲ್ಲಿ ಹಾಲಿನ ದರ ಹೆಚ್ಚಳ ಸೇರಿದಂತೆ ಇನ್ನಿತರ ಸೌಲಭ್ಯ ದೊರಕಲಿದೆ ಎಂದರು.
ಹಾಲು ಉತ್ಪಾದಕರು ರಾಸುಗಳ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸುವ ಜತೆಗೆ ಸ್ವಚ್ಛತೆ ಕಾಪಾಡುವಂತೆ ಈಗಾಗಲೇ ಒಕ್ಕೂಟವು ರಾಸು ವಿಮೆ, ಉಚಿತ ಕಾಲು ಬಾಯಿ ಜ್ವರ ಲಸಿಕೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೌಲಭ್ಯ ಕಲ್ಪಿಸಿದ್ದು, ಉತ್ಪಾದಕರು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.


ಸಂಘದ ಅಧ್ಯಕ್ಷ ಎಸ್.ಮಹೇಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ , ತಮ್ಮ ಅಧಿಕಾರದ ಅವಧಿಯಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಸರ್ವ ಸದಸ್ಯರ ಹಿತ ಕಾಪಾಡಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಆಡಳಿತ ಮಂಡಳಿ ಜತೆ ಚರ್ಚಿಸಿರುವಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಸಂಘದ ನಿವೇಶನದ ಇ-ಖಾತೆ ಮತ್ತು ನಿವೇಶನದ ಜಾಗವನ್ನು ಸರ್ವೇ ಕಾರ್ಯ ಕೈಗೊಂಡು ಕಾಂಪೌಂಡ್ ನಿರ್ಮಿಸುವ ಜತೆಗೆ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು ಎಂದರು.
10 ಮಂದಿ ಷೇರುದಾರರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ವಿತರಿಸಲಾಯಿತಲ್ಲದೆ, ಸಹಕಾರ ಸಂಘಕ್ಕೆ ಆರ್ಥಿಕ ನಷ್ಟವಿಲ್ಲದೆ ಆಡಳಿತ ಮಂಡಳಿಯ ವೈಯಕ್ತಿಕ ಹಣದಲ್ಲೇ ಲಕ್ಕಿ ಡ್ರಾ ಬಹುಮಾನವನ್ನು ವಿತರಿಸಿರುವುದಾಗಿ ಸಂಘದ ಅಧ್ಯಕ್ಷ ಎಸ್.ಮಹೇಶ್ ತಿಳಿಸಿದರು.
ಸಹಕಾರ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಜಯಶೀಲಾ, ಬಿ.ಪಿ.ನಂದೀಶ್, ದತ್ತ, ಪರಮೇಶ್ ಅರವರನ್ನು ಅಭಿನಂದಿಸಲಾಯಿತು.

ಎಂಪಿಸಿಎಸ್ ಉಪಾಧ್ಯಕ್ಷ ಶಂಕರಾಚಾರಿ, ನಿರ್ದೇಶಕರಾದ ಸಿ.ಎಸ್.ಪ್ರಕಾಶ್, ಎಸ್.ಶಿವರಾಜ್, ಚೆನ್ನಪ್ಪ, ಸಿ.ರಾಜಣ್ಣ, ಶಿವಣ್ಣ, ಸಿ.ಕವಿತಾ, ಜಯಲಕ್ಷ್ಮೀ, ರಾಜೇಶ್ವರಿ, ಎಸ್.ಕುಮಾರ್, ಕಾರ್ಯದರ್ಶಿ ಸಿ.ನಾಗಣ್ಣ ಹಾಗೂ ವಿಸ್ತರಣಾಧಿಕಾರಿ ಅಪ್‌ಶಾದ್ ಪಾಷ ಇದ್ದರು.