ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರು ನಗರದ ಅರಣ್ಯ ಇಲಾಖೆ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ದಿನಗೂಲಿಗಳು, ಜೆ.ಸಿ ವೃತ್ತ, ಆರ್.ಪಿ ರಸ್ತೆ ಮಾರ್ಗವಾಗಿ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು. ನೌಕರರಿಗೆ ಕಿರುಕುಳ, ಹಣ ದುರುಪಯೋಗ, ಶೋಷಣೆ ಕುರಿತಂತೆ ಈಗಾಗಲೇ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಹಿಂದಿನ ಚಾಳಿಯನ್ನೇ ಮುಂದುವರಿಸಿ ನೌಕರರಿಗೆ ಮತ್ತಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಆದೇಶದಂತೆ 2009ರ ಜೂ. 11 ಹಾಗೂ 2012ರ ಜು. 31ರಂತೆ ಈಗಾಗಲೇ 2021-22ನೇ ಸಾಲಿಗೆ ನೀಡಲಾದ ಮಾಸಿಕ ಹೆಚ್ಚುವರಿ 2 ಸಾವಿರ ರೂಗಳನ್ನು 2022-23ನೇ ಸಾಲಿಗೆ ಶಿಫಾರಸು ಮಾಡಬೇಕು. ಮಾಸಿಕ ಹೆಚ್ಚುವರಿ ನೀಡುವಲ್ಲಿ ತಾರತಮ್ಯ ಅರ್ಹ ನೌಕರರನ್ನು ಕೈಬಿಟ್ಟಿದ್ದು, ಈ ಹಿಂದೆ ಮಾಸಿಕ ಹೆಚ್ಚುವರಿಗೆ ಶಿಫಾರಸು ಮಾಡುವಾಗ ಕೆಲವು ನೌಕರರಿಗೆ 2 ಆದೇಶ ಜಾರಿ ಮಾಡದೆ 2012ರಂತೆ 1 ಸಾವಿರ ರೂ ನೀಡಲಾಗಿದೆ. 2009ರ ಆದೇಶದ ಸೌಲಭ್ಯವೂ ಸಿಗಬೇಕು. ವ್ಯತ್ಯಾಸದ ಬಾಕಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎ.ಎಂ.ನಾಗರಾಜು, ತುಳಸಿಕುಮಾರ, ನಂಜುಂಡಸ್ವಾಮಿ, ಸುಕನ್ಯಾ, ಶಿವಲಿಂಗಯ್ಯ, ಪ್ರಕಾಶ, ಕುಮಾರ, ಮಂಜು ಇತರರಿದ್ದರು.