ಸಾಗರ: ಸಾಗರ ಸುತ್ತಮುತ್ತಲ ಹಳ್ಳಿಗಳಲ್ಲಿ ರೈತರು ತರಕಾರಿ ಬೆಳೆದು ನಗರಕ್ಕೆ ತಂದು ದಿನವೂ ಮಾರಾಟ ಮಾಡುತ್ತಾರೆ. ಆದರೆ ಅವರಿಗೆ ವ್ಯಾಪಾರ ಮಾಡಲು ವ್ಯವಸ್ಥಿತವಾದ ಜಾಗ ಇಲ್ಲದೆ ತೀವ್ರ ತೊಂದರೆಯಾಗಿದೆ.
ಸಾಗರದ ಪ್ರಮುಖ ರಸ್ತೆಗಳಲ್ಲಿ ರೈತರು ರಸ್ತೆ ಮೇಲೆಯೇ ತರಕಾರಿ ಮಾರಾಟ ಮಾಡುತ್ತಿದ್ದು ಇದರಿಂದ ನಾಗರಿಕರ ಓಡಾಟಕ್ಕೆ ತೀವ್ರ ಸಮಸ್ಯೆ ಆಗುತ್ತಿದೆ. ಜತೆಗೆ ದ್ವಿಚಕ್ರ ವಾಹನಗಳ ಅಪಘಾತ ಕೂಡ ಸಂಭವಿಸುತ್ತಿದೆ. ಶಾಲಾ ಮಕ್ಕಳ ಓಡಾಟಕ್ಕೆ ತರಕಾರಿ ವ್ಯಾಪಾರದಿಂದ ಸಂಚಕಾರ ಬಂದಿದೆ.
ತಾಲೂಕಿನ ಪಡವಗೋಡು, ಕೆಳದಿ, ಮಾಸೂರು, ಬರದವಳ್ಳಿ, ತಾರಗೋಡು, ಶಿರವಾಳ, ಸೂರನಗದ್ದೆ ಈ ಭಾಗಗಳಲ್ಲಿ ಬಣ್ಣ ಸೌತೆ, ಎರೆ ಸೌತೆ, ಮೂಲಂಗಿ, ಭಾರಿ ಗಾತ್ರದ ಬದನೆಕಾಯಿ, ಬೀನ್ಸ್, ಹೀರೇಕಾಯಿ ಯಥೇಚ್ಛವಾಗಿ ಬೆಳೆಯುತ್ತಾರೆ. ಇದು ಈ ಭಾಗದ ಸಾಕಷ್ಟು ರೈತರ ಸ್ವಾವಲಂಬಿ ಬದುಕಿಗೆ ದಾರಿಯಾಗಿದೆ. ಇಲ್ಲಿ ಬೆಳೆಯುವ ತರಕಾರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದರೆ ಪ್ರತಿದಿನ ತರಕಾರಿ ಮಾರಲು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಗುರುವಾರದ ವಾರದ ಸಂತೆಯಲ್ಲಿ ಮಾತ್ರ ತರಕಾರಿ ಮಾರಲು ಅವಕಾಶವಿದೆ. ಆದರೆ ಬೆಳೆದ ತರಕಾರಿಗಳು ಅಲ್ಲಿಯವರೆಗೆ ಕಾದರೆ ಬಲಿತು ಬಿಡುತ್ತವೆ ಇಲ್ಲವೇ ಕೊಳೆತು ಬಿಡುತ್ತವೆ. ಈ ಹಿನ್ನೆಲೆಯಲ್ಲಿ ರೈತರು ರಸ್ತೆಗಳ ಮೇಲೆಯೇ ಇಲ್ಲಿ ಪ್ರತಿನಿತ್ಯ ತರಕಾರಿ ಮಾರಾಟ ಮಾಡುತ್ತಾರೆ. ಆಗ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಅಧಿಕಾರಿಗಳು ಇವರನ್ನು ಬೆದರಿಸಿ ಓಡಿಸುತ್ತಾರೆ. ಸಾಗರದ ಜನರು ತಾಜಾ ತರಕಾರಿಗಳಿಗೆ ಮುಗಿ ಬೀಳುವುದರಿಂದ ಕೆಳದಿ, ಮಾಸೂರಿನ ಬೀನ್ಸ್ ಮತ್ತು ಶಿರವಾಳ ಬರದವಳ್ಳಿಯ ಎರೆಸೌತೆ, ಬೆಂಡೆಕಾಯಿಗೆ ಬಹುಬೇಡಿಕೆ ನಿರ್ಮಾಣವಾಗಿದ್ದು ವ್ಯಾಪಾರಕ್ಕೆ ಸರಿ ದಾರಿ ಸಿಗದೆ ಬೆಳೆಗಾರರು ಸಮಸ್ಯೆಗೆ ಒಳಗಾಗಿದ್ದಾರೆ.
ಇನ್ನು ಸೊರಬ, ಶಿಕಾರಿಪುರ, ಸಿದ್ದಾಪುರ ತಾಲೂಕಿನ ತರಕಾರಿ ಬೆಳೆಗಾರರು ಕೂಡ ದಿನವೂ ಸಾಗರಕ್ಕೆ ಆಗಮಿಸಿ ತರಕಾರಿಯನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ ಜಾಗಕ್ಕಾಗಿ ತರಕಾರಿ ಬೆಳೆದ ರೈತರು ಮತ್ತು ತಂದು ತರಕಾರಿ ಮಾರುವವರಿಗೂ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೊಂದು ಶಾಶ್ವತ ಪರಿಹಾರವನ್ನು ಸಂಬಂಧಪಟ್ಟ ಇಲಾಖೆ ಕಂಡುಹಿಡಿಯಬೇಕು.
ಮಲೆನಾಡಿನಲ್ಲಿ ದಿನೇದಿನೇ ತರಕಾರಿ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಪಿಎಂಸಿಯಲ್ಲಿ ಒಂದು ನಿಗದಿತ ಸ್ಥಳವನ್ನು ಗುರುತಿಸಿ ಅದನ್ನು ನಗರಸಭೆಯಿಂದ ಲೀಸ್‌ಗೆ ಪಡೆದು ನಿಗದಿತ ಸಮಯದಲ್ಲಿ ಮಾರಾಟ ಮಾಡಲು ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ಈ ಸಹಕಾರ ನಿಜವಾದ ಬೆಳೆಗಾರರಿಗೆ ಮಾತ್ರ ದೊರಕುವಂತಾಗಬೇಕು ಎನ್ನುತ್ತಾರೆ ರಾಜ್ಯ ರೈತಸಂಘದ ಅಧ್ಯಕ್ಷ ಶಿವಾನಂದ ಕುಗ್ವೆ.