ಮೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಿಕ್ಸಿಯಲ್ಲಿ ಮಸಾಲೆ ಅರೆದುಕೊಳ್ಳುತ್ತಿರುವ ಹನುಮಂತಪ್ಪ. 
ಜಿಲ್ಲೆ

ವಿದ್ಯುತ್ ಕೇಂದ್ರದಲ್ಲೇ ನಿತ್ಯ ಮಸಾಲೆಗೆ ಮಿಕ್ಸಿ!: ಇಂಜಿನಿಯರ್ ಬಾಯಿತಪ್ಪಿ ಆಡಿದ ಮಾತು; ಉಗುಳುವಂತಿಲ್ಲ, ನುಂಗುವಂತಿಲ್ಲ..

Webdesk - Ravikanth

ಹೊಳೆಹೊನ್ನೂರು: ಹಳ್ಳಿಗಾಡಿನಲ್ಲಿ ವಿದ್ಯುತ್ ಸಂಪರ್ಕದಲ್ಲಿ ತೀವ್ರ ಅಡಚಣೆಯಾದರೆ ಸಾರ್ವಜನಿಕರು ಮೆಸ್ಕಾಂ ಕಚೇರಿಗೆ ಕರೆ ಮಾಡಿ ಸಿಬ್ಬಂದಿಗೆ ರುಬ್ಬುವುದು ಮಾಮೂಲಿ! ಆದರೆ, ಇಲ್ಲೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯುತ್ ವಿತರಣಾ ಕೇಂದ್ರದಲ್ಲೇ ನಿತ್ಯ ಮನೆಗೆ ಬೇಕಾದ ಮಸಾಲೆ ರುಬ್ಬಿಕೊಂಡು ಹೋಗುತ್ತಿದಾರೆ. ಅಷ್ಟೇ ಅಲ್ಲ, ಎರಡ್ಮೂರು ಮೊಬೈಲ್​ಗಳನ್ನೂ ಚಾರ್ಚ್ ಮಾಡಿಕೊಳ್ಳುತ್ತಾರೆ.

ಇದೇನಪ್ಪಾ ಅಂತೀರಾ... ಭದ್ರಾವತಿ ತಾಲೂಕು ಮಂಗೋಟೆ ಗ್ರಾಮದ ಮಾರಿಗುಡಿ ಹನುಮಂತಪ್ಪ ಎಂಬುವರು ಮನೆಗೆ ಸಮರ್ಪಕ ವಿದ್ಯುತ್ ವಿತರಣೆಗೆ ಆಗ್ರಹಿಸಿ ಮೆಸ್ಕಾಂ ಅಧಿಕಾರಿಗಳು, ಶಾಸಕರು, ಸಂಸದರನ್ನು ಭೇಟಿ ಮಾಡಿ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ರೋಸಿ ಹೋದ ಹನುಮಂತಪ್ಪ, ಮೆಸ್ಕಾಂ ಇಂಜಿನಿಯರ್​ಗೆ ತರಾಟೆ ತೆಗೆದುಕೊಂಡಿದ್ದಾರೆ. ಆಗ ಮಾತಿನ ಭರದಲ್ಲಿ ಇಂಜಿನಿಯರ್, ‘ಮನೆಯಲ್ಲಿ ಕರೆಂಟ್ ಇಲ್ಲಾಂದ್ರೆ ನಮ್ಮ ಆಫೀಸಿಗೆ ಬಂದು ಮಿಕ್ಸಿ ಮಾಡಿಕೊಂಡು ಹೋಗಯ್ಯಾ’ ಅಂದಿದ್ದಾರೆ.

ಅಂದಿನಿಂದ ಹನುಮಂತಪ್ಪ ಮನೆಯಿಂದ ಕೂಗಳೆತೆ ದೂರದಲ್ಲಿರುವ ಮೆಸ್ಕಾಂ ಕಚೇರಿಗೆ ಮಿಕ್ಸಿ ತೆಗೆದುಕೊಂಡು ಬಂದು ಮನೆಗೆ ಬೇಕಾದ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ, 4-5 ಮೊಬೈಲ್​ಗಳನ್ನು ಚಾರ್ಜ್​ಗೆ ಹಾಕಿ ಬ್ಯಾಟರಿ ಫುಲ್ ಚಾರ್ಜ್ ಮಾಡಿಕೊಂಡು ಹೋಗುತ್ತಿದ್ದಾರೆ. ಸುಮಾರು ಹತ್ತು ತಿಂಗಳಿಂದ ಈ ಪ್ರಕ್ರಿಯೆ ನಡೆದರೂ ಆತನ ಮನೆಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಕ್ರಮವಹಿಸಿಲ್ಲ. ಅಲ್ಲದೆ, ಯಾವೊಬ್ಬ ಸಿಬ್ಬಂದಿಯೂ ಹನುಮಂತನನ್ನು ತಡೆಯುವ ಪ್ರಯತ್ನ ಮಾಡಿಲ್ಲ.