ಸಿಂಧನೂರು: ಬಳ್ಳಾರಿ, ಬೆಂಗಳೂರು ಹಾಗೂ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ದಢೇಸುಗೂರು ಬಳಿಯ ತುಂಗಭದ್ರಾ ನದಿಗೆ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿದೆ. ಇದರಿಂದಾಗಿ ಈ ಸೇತುವೆ ಮೇಲೆ ಸಂಚರಿಸುವ ಜನರಲ್ಲಿ ಅಭದ್ರತೆ ಕಾಡುವಂತಾಗಿದೆ.
ರಾಯಚೂರು, ಕಲಬುರಗಿ, ಬೀದರ ಜಿಲ್ಲೆಗಳಿಂದ ಬರುವ ವಾಹನಗಳು ಸಿಂಧನೂರು ಮೂಲಲ ಬಳ್ಳಾರಿ, ಬೆಂಗಳೂರು ಹಾಗೂ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಗೆ ತುಂಗಭದ್ರಾ ನದಿ ಸೇತುವೆ ಸಂಪರ್ಕ ಮಾರ್ಗವಾಗಿದೆ. ಪ್ರಸ್ತುತ ಈ ಸೇತುವೆ ಮೇಲಿನ ಸಂಚಾರ ಅಪಾಯಕಾರಿಯಂತಾಗಿದೆ.
ಸೇತುವೆ ನಿರ್ಮಾಣಗೊಂಡು ಹಲವಾರು ವರ್ಷಗಳೇ ಗತಿಸಿವೆ. ಈ ಹಿಂದೆ ಸೇತುವೆಯಲ್ಲಿನ ಹಾಳಾಗಿದ್ದ ಕಬ್ಬಿಣದ ಸರಳು ಬದಲಾಯಿಸಿದ್ದು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ರಕ್ಷಣೆಯ ಕಾಮಗಾರಿ ನಡೆದಿಲ್ಲ. ಸೇತುವೆ ಮೇಲೆ ಅತಿ ಹೆಚ್ಚು ವಾಹನಗಳ ಓಡಾಟವಿದ್ದು, ಅದರಲ್ಲೂ ಅದಿರು ಹೊತ್ತು ಸಾಗುವ ವಾಹನಗಳೇ ಜಾಸ್ತಿ.
ಇದರಿಂದ ಸೇತುವೆ ಭಾರ ತಾಳುವುದು ಕಷ್ಟವಾಗಿದೆ. ವಾಹನಗಳ ಓಡಾಟದುಣದ ಸೇತುವೆ ನಡುಗತ್ತದೆ. ಅತಿ ಉದ್ದವಾದ ಸೇತುವೆ ಇದಾಗಿದೆ. ಆದರೆ, ಸೇತುವೆಯ ಕೆಳ ಭಾಗ ಹಾಳಾಗಿದೆ.
ಸಿಂಧನೂರಿನ ಹಿರೇಹಳ್ಳ ಸೇತುವೆ ಹಾಗೂ ದಢೇಸುಗೂರು ಬಳಿಯ ತುಂಗಭದ್ರಾ ನದಿಯ ಸೇತುವೆ ನಿರ್ಮಾಣ ಉದ್ದೇಶದಿಂದ ಕಳೆದ ಐದು ವರ್ಷದಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿರೇಹಳ್ಳ ಸೇತುವೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ದಢೇಸುಗೂರು ಸೇತುವೆ ಕಾಮಗಾರಿ ಕುರಿತ ಪ್ರಸ್ತಾವನೆಗೆ ಅಸ್ತು ನೀಡಲಾಗಿಲ್ಲ. ಇದರಿಂದ ಸೇತುವೆ ವಿಸ್ತರಣೆ ಮಾಡುವ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಹಳೆಯ ಸೇತುವೆಯ ಮೇಲೆ ಬಸ್, ಲಾರಿ ಸೇರಿ ನೂರಾರು ವಾಹನಗಳು ಓಡಾಡುತ್ತವೆ. ಅದಿರು ಲಾರಿಗಳ ಅರ್ಭಟ ಹೆಚ್ಚಿದೆ. ಇದರಿಂದ ಸೇತುವೆಗೆ ಪದೇ ಪದೇ ಹಾನಿಯಾಗುತ್ತಿದೆ. ಅತೀ ಭಾರದ ವಾಹನ ನಿಷೇದಿಸಿದ್ದರೂ, ಇದೇ ಮಾರ್ಗವಾಗಿಯೇ ಅದಿರು ಸಾಗಾಣಿಕೆ ಮಾಡಲಾಗುತ್ತಿದೆ.
ದಢೇಸುಗೂರು ಬಳಿಯ ತುಂಗಭದ್ರಾ ನದಿ ಸೇತುವೆ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ದಶಕದಿಂದಿದ್ದರೂ, ಈ ಭಾಗದ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಕಾರ್ಯಗತವಾಗಿಲ್ಲ. ರಾಯಚೂರು, ಬಳ್ಳಾರಿಯ ಜಿಲ್ಲೆಯ ಜನಪ್ರತಿನಿಧಿಗಳಲ್ಲೂ ಇಚ್ಚಾಶಕ್ತಿ ಕೊರತೆಯಿದೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇತುವೆ ವಿಸ್ತರಣೆಗೆ ಸಂಬಂಧಿಸಿದ ಎರಡು ಬಾರಿ ಕೇಂದ್ರಕ್ಕೆ ಪತ್ರ ಬರೆದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕವೂ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಣ ಮಂಜೂರು ಮಾಡಿ, ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಇದುವರೆಗೆ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಕ್ಕಿಲ್ಲ.
ದಢೇಸುಗೂರು ಬಳಿಯ ತುಂಗಭದ್ರಾ ನದಿ ಸೇತುವೆ ತುಂಬಾ ಹಳೆಯದಾಗಿರುವುದರಿಂದ ಹೊಸ ಸೇತುವೆ ನಿರ್ಮಿಸುವುದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಮಗಾರಿಗೆ ತಗಲುವ ವೆಚ್ಚದ ಬಗ್ಗೆ ವರದಿ ಸಲ್ಲಿಕೆಯಾಗಬೇಕಿದೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ.| ವಿಜಯಕುಮಾರ ಪಾಟೀಲ್, ಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹುನಗುಂದ ಸಿಂಧನೂರಿನ ಹಿರೇಹಳ್ಳ ಸೇತುವೆ ವಿಸ್ತರಣೆ ಮಾಡಿದಂತೆ, ದಢೇಸುಗೂರು ಬಳಿಯ ತುಂಗಭದ್ರಾ ನದಿ ಸೇತುವೆ ವಿಸ್ತರಣೆಯಾದರೆ ಸಂಚಾರಕ್ಕೆ ಅನಕೂಲವಾಗಲಿದೆ. ಈ ಕುರಿತು ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು.| ರಾಜಶೇಖರ ಪಾಟೀಲ್, ಎಪಿಎಂಸಿ ರಾಜ್ಯ ಮಾಜಿ ಉಪಾಧ್ಯಕ್ಷ, ಸಿಂಧನೂರು