ವಿಜಯವಾಣೆ ಸುದ್ದಿಜಾಲ ದಾಬಸ್‌ಪೇಟೆ
ಇಳುವರಿ ಕಡಿಮೆ, ಅತಿವೃಷ್ಠಿ, ಅನಾವೃಷ್ಠಿಯಿಂದಾಗಿ ಬೆಳೆ ಪರಿಹಾರದ ನಷ್ಟ ಭರಿಸಲು ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿದ್ದು, ಆ.16ರೊಳಗೆ ನೋಂದಾಯಿಸಿಕೊಂಡು, ಯೋಜನೆಯ ಸದುಪಯೋಗಪಡೆದುಕೊಳ್ಳಿ ಎಂದು ಸೋಂಪುರ ಕೃಷಿ ಸಹಾಯಕ ಅಧಿಕಾರಿ ಶಭಾನಾ ಡಿ.ನದಾಫ್ ಹೇಳಿದರು.
ಪಟ್ಟಣದ ಸೋಂಪುರ ಕೃಷಿ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ತಮ್ಮ ಕೃಷಿಯಲ್ಲಿ ಆಧುನಿಕ ಬೇಸಾಯ ಅಳವಡಿಸಿಕೊಳ್ಳಲು ಈ ವಿಮೆ ಯೋಜನೆಯು ಪ್ರೋತ್ಸಾಹಿಸುತ್ತದೆ. ಪ್ರಕೃತಿ ವಿಕೋಪ ಹಾಗೂ ಕೀಟರೋಗ ಬಾಧೆಯಿಂದ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಪರಿಹಾರ ಒದಗಿಸಲು ರಾಷ್ಟ್ರೀಯ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಸಹಾಯಕ ಕೃಷಿ ಅಧಿಕಾರಿ ಪ್ರಭು ಮಾತನಾಡಿ, ರೈತರಿಗೆ ಬೆಳೆ ವಿಮೆಯು ಉಪಯೋಗವಾಗಲಿದ್ದು, ರೈತರು ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ, ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು. ಈ ಬಗ್ಗೆ ಯಾವುದೇ ಗೊಂದಲಗಳಿದ್ದಲ್ಲಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದರು.