ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ನೆಲಮಂಗಲ ತಾಲೂಕು ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಹೊಟ್ಟೆಯಲ್ಲಿದ್ದ ಮಗುವಿನೊಂದಿಗೆ 8 ತಿಂಗಳ ಗರ್ಭಿಣಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
ಟಿಪ್ಪರ್ ಲಾರಿ ಹಿಂದಿನಿಂದ ದ್ವಿಚಕ್ರವಾಹನಕ್ಕೆ ಡಿಕ್ಕಿಯೊಡೆದು ಅಪಘಾತ ಸಂಭವಿಸಿದೆ.ತೋಟನಹಳ್ಳಿ ಗ್ರಾಮದ ಸಿಂಚನಾ (30) ಮೃತ ದುರ್ದೈವಿ. ಪತಿ ಮಂಜುನಾಥ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಸೂತ್ರ ಹೆರಿಗೆಗಾಗಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದರು: ಸಿಂಚನಾಗೆ ಮುಂದಿನ ಆ.17ಕ್ಕೆ 9 ತಿಂಗಳು ತುಂಬುತ್ತಿತ್ತು. ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ದ್ವಿಚಕ್ರ ವಾಹನದಲ್ಲಿ ದಾಬಸ್‌ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಸಿಂಚನಾ ದ್ವಿಚಕ್ರವಾಹನದಿಂದ ಕೆಳೆಗೆ ಬಿದ್ದಿದ್ದಾರೆ. ಬಿದ್ದ ಸಿಂಚನಾ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದು ತೀವ್ರ ರಕ್ತಸ್ರಾವದೊಂದಿಗೆ ಸಿಂಚನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಹೊಟ್ಟೆಯಲ್ಲಿದ್ದ ಮಗು ಹೊರಕ್ಕೆ: ಅಪಘಾತದ ವೇಳೆ ಸಿಂಚನಾ ಗರ್ಭದಲ್ಲಿದ್ದ ಮಗು ಹೊರಬಂದಿದೆ, ವಿಲವಿಲ ಒದ್ದಾಡಿ ಅರೆಕ್ಷಣದಲ್ಲಿ ಶಿಶುವೂ ಮೃತಪಟ್ಟಿದೆ. ಇವೆರಡು ಘಟನೆಗನ್ನು ಪ್ರತ್ಯಕ್ಷ ಕಂಡ ಪತಿ ಮಂಜುನಾಥ್ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತದಲ್ಲಿ ಶಿಶುವಿನೊಂದಿಗೆ ರಕ್ತಸಿಕ್ತವಾಗಿ ಉಸಿರುಚೆಲ್ಲಿದ ಸಿಂಚನಾ ಮೃತದೇಹ ಕಂಡು ಸ್ಥಳೀಯರು ಕಣ್ಣೀರು ಸುರಿಸಿದರು. ಈ ಮನಕಲಕುವ ದೃಶ್ಯ ಕಂಡ ಸ್ಥಳೀಯರು ಟಿಪ್ಪರ್ ಲಾರಿ ಚಾಲಕನಿಗೆ ಹಿಡಿಶಾಪ ಹಾಕಿದರು. ಈ ಭಾಗದಲ್ಲಿ ಟಿಪ್ಪರ್ ಲಾರಿಗಳ ಆರ್ಭಟ ಹೆಚ್ಚಾಗಿದೆ. ಚಾಲಕರ ನಿರ್ಲಕ್ಷ್ಯಚಾಲನೆಯಿಂದ ಈ ಭಾಗದಲ್ಲಿ ಎಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಸಂಚಾರ ಪೊಲೀಸರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ಮೃತ ದೇಹ ರವಾನೆ: ಅಪಘಾತದ ಬಳಿಕ ಶಿಶು ಹಾಗೂ ಸಿಂಚನಾ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಗೆ ರವಾನಿಸಿದರು.
ಪತಿಯ ಗೋಳಾಟ: ಶಿವಗಂಗೆ ಗಣೇಶನ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ದಾಬಸ್‌ಪೇಟೆ ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಎಡೆಹಳ್ಳಿ ಮೂಲಕ ತೋಟನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದೇವು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ನಾವಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿತು. ಕೆಳಗೆ ಬಿದ್ದ ಸಿಂಚನಾ ಮೇಲೆ ಟಿಪ್ಪರ್ ಹರಿಯಿತು. ಹೊಟ್ಟೆಯಿಂದ ಮಗು ಆಚೆ ಬಂದಿದೆ ಈ ದೃಶ್ಯವನ್ನು ಕಣ್ಣಾರೆ ನೋಡುವಂತಾಯಿತು. ಇಂಥ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ ಎಂದು ಪತಿ ಮಂಜುನಾಥ್ ಗೋಳಾಡುತ್ತಿದ್ ದೃಶ್ಯ ಮನಕಲಕುವಂತಿತ್ತು.
ಚಾಲಕರ ಜಗಳ ಕಾರಣವಾಯ್ತೆ? ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಲಾರಿ ಚಾಲಕರ ನಡುವೆ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ, ಈ ವೇಳೆ ಟ್ರಾಫಿಕ್ ಜಾಮ್ ಆಗಿದ್ದರಿಂದ ಮಂಜುನಾಥ್ ಸರ್ವಿಸ್ ರಸ್ತೆಗೆ ದ್ವಿಚಕ್ರ ವಾಹನ ಇಳಿಸಿದ್ದರು. ತಕ್ಷಣವೇ ಯಮಸ್ವರೂಪಿಯಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿಯೊಡೆದಿದೆ ಚಾಲಕರಿಬ್ಬರ ಜಗಳವೂ ಈ ಪ್ರಕರಣಕ್ಕೆ ನೇರಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ಅಪಘಾತ ವಲಯ? ಕಳೆದ 6 ತಿಂಗಳಲ್ಲಿ ನೆಲಮಂಗಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ 90ಕ್ಕೂ ಹೆಚ್ಚು ಅಪಘಾತ ಸಂಭವಿಸಿದ್ದು,ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಚಾಲಕರ ನಿರ್ಲಕ್ಷ್ಯ ಚಾಲನೆ, ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯವಾಗಿದೆ. ಇದರಿಂದ ಈ ಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಂಡಂತಾಗುತ್ತಿದೆ ಬೇಕಾ ಬಿಟ್ಟಿ ವಾಹನ ಚಲಾಯಿಸುವ ವಾಹನ ಸವಾರರಿಗೆ ಲಗಾಮು ಹಾಕಬೇಕಿದೆ ಎಂದು ಸಾರ್ವಜನಿಕ ವಲಯದಿಂದ ತೀವ್ರ ಒತ್ತಾಯ ಕೇಳಿ ಬಂತು.