ಧಾರವಾಡ: ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡಮಾಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಆಯ್ಕೆಯಾಗಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಡಿ.ಎಂ. ಹಿರೇಮಠ ಧಾರವಾಡದಲ್ಲಿ ಹೇಳಿಕೆ ನೀಡಿದ್ದು, ಜ.31ರಂದು ದ.ರಾ. ಬೇಂದ್ರೆ ಅವರ 125ನೇ ಜನ್ಮದಿನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಧಾರವಾಡ ಸಾಧನಕೇರಿಯ ಬೇಂದ್ರೆ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸರ್ಕಾರದಿಂದ ಪ್ರಶಸ್ತಿ ಮೊತ್ತ ಇಳಿಸಿದ್ದರೂ ಒಂದು ಲಕ್ಷ ರೂ. ಕೊಡಲು ನಿರ್ಧರಿಸಲಾಗಿದೆ ಎಂದರು.
ಸರ್ಕಾರ ಈ ಮೊದಲು ಒಂದು ಲಕ್ಷ ರೂಪಾಯಿ ನೀಡುತ್ತಿತ್ತು. ಆದರೆ ಈಗ ಆ ಮೊತ್ತವನ್ನು ಹತ್ತು ಸಾವಿರಕ್ಕೆ ಇಳಿಸಿದೆ. ಆದಾಗ್ಯೂ ಪ್ರಶಸ್ತಿ ಜತೆಗೆ ಒಂದು ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿದೆ.
ಬೇಂದ್ರೆ ಬಳಗ ಮತ್ತು ಕುಂಟುಬಸ್ಥರು ನೀಡಿರುವ ನಿಧಿಯ ಬಡ್ಡಿಯಿಂದ 90 ಸಾವಿರ ರೂಪಾಯಿ ಬಳಸಲು ನಿರ್ಧರಿಸಲಾಗಿದೆ. ಇದರ ಜತೆಗೆ ಸರ್ಕಾರ ನೀಡುವ 10 ಸಾವಿರ ರೂಪಾಯಿ ಸೇರಿಸಿ ಒಂದು ಲಕ್ಷ ಕೊಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಿ.ಎಂ. ಹಿರೇಮಠ ಹೇಳಿದರು.