ಮಂಗಳೂರು : ಪ್ರಜಾಪ್ರಭುತ್ವದಲ್ಲಿ ಮತದಾರರ ಪ್ರತಿಯೊಂದು ಮತವೂ ಮೌಲ್ಯಯುತವಾಗಿದ್ದು, ಜವಾಬ್ದಾರಿಯುತ ಮತ ಚಲಾವಣೆಯಿಂದ ಈ ದೇಶದ ರಕ್ಷಣೆ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ವತಿಯಿಂದ
ಕಾಲೇಜಿನ ರವೀಂದ್ರ ಕಲಾಭನವನದಲ್ಲಿ ಸ್ವೀಪ್ ಸಮಿತಿಯಿಂದ ಶುಕ್ರವಾರ ನಡೆದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನ ದಿನದಂದು ದ.ಕ.ಜಿಲ್ಲೆಯ 1876 ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿ ಹೊರತುಪಡಿಸಿ 11,500ರಷ್ಟು
ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮತದಾರರು ನಿರ್ಭೀತವಾಗಿ ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಬಹುದು. ಕಾಲೇಜು ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ತಮ್ಮವರಿಗೆ ತಿಳಿಸುವ ಜತೆಗೆ ಮತದಾನದ ದಿನಾಂಕಕ್ಕೆ ಮುಂಚಿತವಾಗಿಯೇ ವೋಟರ್ಸ್ ಹೆಲ್ಪ್‌ಲೈನ್ ಆ್ಯಪ್‌ನಲ್ಲಿ ಮತದಾರರ ಹೆಸರು ಇರುವುದನ್ನು ಖಾತರಿಪಡಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿಕಲಚೇತನರಿಗೆ ರ‌್ಯಾಂಪ್ ವ್ಯವಸ್ಥೆ, ವಿದ್ಯುಚ್ಛಕ್ತಿ, ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಚುನಾವಣೆಯ ಅಕ್ರಮಗಳಿಗೆ ಸಂಬಂಧಿಸಿ ದೂರುದಾರರು ಗೌಪ್ಯವಾಗಿ ಸಿವಿಜಿಲ್ ಮೂಲಕ ದೂರು ಸಲ್ಲಿಸಬಹುದು ಎಂದರು.
ಜಿಲ್ಲಾ ಚುನಾವಣಾ ಆಯೋಗದಿಂದ ಆಯ್ಕೆಯಾಗಿರುವ ಜಿಲ್ಲಾ ಚುನಾವಣಾ ಐಕಾನ್ ನಟ ಅರವಿಂದ ಬೋಳಾರ್ ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ತಮ್ಮ ಮನೆಯವರು, ನೆರೆಹೊರೆಯವರು ಮಾತ್ರವಲ್ಲದೆ ಹೊರ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಂಬಂಧಿಕರಿಗೆ ಮತದಾನ ಮಾಡಲು ಮರೆಯದಂತೆ ಜಾಗೃತಿ ಮೂಡಿಸಿದರು. ಮನಪಾ ಆಯುಕ್ತ ಆನಂದ್ ಉಪಸ್ಥಿತರಿದ್ದರು.
ತಸ್ನೀಮ್ ಸ್ವಾಗತಿಸಿ, ಪ್ರಾಂಶುಪಾಲೆ ಡಾ. ಅನುಸೂಯ ರೈ ವಂದಿಸಿದರು.
ಕಾಲೇಜಿನ ಪ್ರಾಧ್ಯಾಪಕಿ ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ವ್ಯಂಗ್ಯಚಿತ್ರಗಾರ ಜಾನ್ ಚಂದ್ರನ್ ಅವರು ಮತದಾರರಲ್ಲಿ ಜಾಗೃತಿ ಮೂಡಿಸಲು ರಚಿಸಿದ ವ್ಯಂಗ್ಯಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಬಳಿಕ ಗಿರೀಶ್ ನಾವಡ ಯಕ್ಷಗಾನ ತಂಡದಿಂದ ಮತದಾನ ಜಾಗೃತಿ ಮೂಡಿಸಲಾಯಿತು.
.....................