ಮಂಗಳೂರು : ರಾಜ್ಯ ಸರ್ಕಾರದ ಮುಸ್ಲಿಂ ಓಲೈಕೆ ನೀತಿಯಿಂದ ಶಿವಮೊಗ್ಗದಲ್ಲಿ ಗಲಭೆಗೆ ಕುಮ್ಮಕ್ಕು ದೊರೆತಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಎಂ. ಆರೋಪಿಸಿದ್ದಾರೆ.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕೆಲವು ಕಡೆ ಮುಸ್ಲಿಂ ಸಮುದಾಯದವರು ಹಾಕಿರುವ ಕಟೌಟ್‌ನಲ್ಲಿ
ಟಿಪ್ಪುಸುಲ್ತಾನ ಇಬ್ಬರು ಸೈನಿಕರನ್ನು ಕೊಲ್ಲುವ ಭಾವಚಿತ್ರ ಹಾಗೂ ಅಖಂಡ ಭಾರತ ಮುಸ್ಲಿಂ ರಾಷ್ಟ್ರದ ಕಟೌಟ್ ಅಳವಡಿಸಲಾಗಿದ್ದು ಇದು ಎರಡು ಗುಂಪುಗಳ ನಡುವೆ ಮಾತಿನ ಚಕಮುಕಿಗೆ ಕಾರಣವಾಗಿತ್ತು. ಪೋಲಿಸರು ಮುನ್ನೆಚರಿಕೆಯ ಕ್ರಮವಾಗಿ ಸೈನಿಕರು ಇದ್ದ ಭಾವಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಇದನ್ನು ನೆಪವಾಗಿಸಿ ಪ್ರತಿಭಟನೆ ನಡೆಸಿ ಗಲಭೆ ನಡೆಯಲು ಸಂಚು ರೂಪಿಸಿದ್ದರು. ಉತ್ತರ ಪ್ರದೇಶದಿಂದ ಕೆಲವರು ವಾಹನದ ಮೂಲಕ ಆಗಮಿಸಿ ಗಲಭೆ ಸೃಷ್ಟಿಸಿದ ಮಾಹಿತಿ ಇದೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುದರ್ಶನ ಎಂ. ಆಗ್ರಹಿಸಿದ್ದಾರೆ.